

Actress Ramya: 'ಅಭಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ದಿವ್ಯಾ ಸ್ಪಂದನ, ಇಂದು ಕನ್ನಡಿಗರ ಪ್ರೀತಿಯ ನಟಿ ರಮ್ಯ. ಸ್ಯಾಂಡಲ್ವುಡ್ನ ಮೋಹಕ ತಾರೆಯಾಗಿ ಮಿಂಚಿದ ರಮ್ಯ, ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದೇ ಆದರೂ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಒಂದಲ್ಲ ಒಂದು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಮೋಹಕ ತಾರೆ, ಇದೀಗ ತಮ್ಮ ಬಾಲ್ಯದ ಪಾಸ್ಪೋರ್ಟ್ ನೋಡಲು ಹೇಗಿತ್ತು ಎಂಬುದನ್ನು ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದಾರೆ.
ಚಿತ್ರಗಳಿಂದ ಸದ್ಯ ದೂರ ಉಳಿದಿರುವ ರಮ್ಯ, ತಮ್ಮ ಪ್ರವಾಸ ಅಥವಾ ಇತರೆ ವಿಷಯಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಹಾಗೂ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುತ್ತಾರೆ. ಈಗ ಅದೇ ರೀತಿ ತಾವು ಬಾಲ್ಯದಲ್ಲಿ ಮಾಡಿಸಿಕೊಂಡಿದ್ದ ಪಾಸ್ಪೋರ್ಟ್ ಮುಖಪುಟವನ್ನು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋ ನೋಡುತ್ತಿದ್ದಂತೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಬಾಲ್ಯದಲ್ಲಿ ರಮ್ಯ ಎಷ್ಟು ಚೆನ್ನಾಗಿದ್ದರು, ಮುದ್ದಾಗಿದ್ದರು ಎಂದೆಲ್ಲ ಕಮೆಂಟ್ ಮಾಡಿ ಅಭಿಪ್ರಾಯಿಸಿದ್ದಾರೆ. ಕೆಲವರು 'ಎವರ್ಗ್ರೀನ್ ನಟಿ' ಎಂದು ಕರೆದರೆ, ಇನ್ನೂ ಕೆಲವರು ಹೆಸರಿಗೆ ತಕ್ಕಂತೆ 'ಮೋಹಕ ತಾರೆ' ಎಂದು ಕರೆದಿದ್ದಾರೆ. ಒಟ್ಟಾರೆ ನಟಿ ರಮ್ಯ ಏನೇ ಹಂಚಿಕೊಂಡರು. ಅದಕ್ಕೆ ಬಹಳ ವೇಗವಾಗಿ ನೆಟ್ಟಿಗರಿಂದ ಪ್ರತಿಕ್ರಿಯೆಗಳು ಹರಿದುಬರುತ್ತವೆ.