ಮಳೆಹಾನಿ ಸಂತ್ರಸ್ತರಿಗೆ ಪರಿಹಾರ: ಮೇ 26ರಿಂದ ಸಮೀಕ್ಷೆಗೆ ಚಾಲನೆ

sai layout water
Published on

ಬೆಂಗಳೂರು: ಮಹಾನಗರದಲ್ಲಿ ಈ ವಾರದ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಹೆಚ್ಚಿನ ನಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಪಾಲಿಕೆ ಅಧಿಕಾರಿಗಳು ಸೋಮವಾರದಿಂದ (ಮೇ 26) ಸರ್ವೆ ಕಾರ್ಯವನ್ನು ಆರಂಭಿಸಲಿದ್ದಾರೆ.

ಬುಧವಾರವಷ್ಟೇ ನಗರ ಪ್ರದಕ್ಷಿಣೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ದವಸ-ಧಾನ್ಯ, ಪೀಠೋಪಕರಣ ಹಾಗೂ ಇತರ ಪರಿಕರ ಹಾಳಾಗಿದ್ದಲ್ಲಿ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು. ಪರಿಹಾರ ಮೊತ್ತವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (ಎನ್‌ಡಿಆರ್‌ಎಫ್​​) ಮಾರ್ಗಸೂಚಿ ಆಧರಿಸಿ ವಿತರಿಸಲಾಗುವುದು. ಇದನ್ನು ಪಾಲಿಕೆ ನೀಡಲಿದ್ದು, ಸರ್ವೆ ಕಾರ್ಯ ಮುಗಿದ ನಂತರ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ.

ಈ ಸಂಬಂಧ ಗುರುವಾರ ಬಿಬಿಎಂಪಿ ಮುಖ್ಯ ಆಯುಕ್ತರು ಪಾಲಿಕೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ವಲಯವಾರು ಸರ್ವೆ ನಡೆಸಿ ಅಲ್ಲಿಯೇ ತ್ಚವರಿತವಾಗಿ ಪರಿಹಾರ ವಿತರಿಸಬಹುದು ಎಂಬ ಸಲಹೆ ವ್ಯಕ್ತವಾಗಿದೆ. ಇದಕ್ಕಾಗಿ ಕಂದಾಯ ವಿಭಾಗದ ಅಧಿಕಾರಿಗಳು ಇತರ ವಿಭಾಗಗಳ ಸಿಬ್ಬಂದಿಯ ನೆರವು ಪಡೆದು, ಹಾನಿಗೀಡಾದ ಮನೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಆನಂತರ ಮಾರ್ಗಸೂಚಿ ಅನ್ವಯ ಪರಿಹಾರ ಹಣವನ್ನು ಸಂತ್ರಸ್ತರಿಗೆ ಚೆಕ್ ಮೂಲಕ ವಿತರಿಸಲು ಚರ್ಚೆ ನಡೆಸಲಾಗಿದೆ.

ಶನಿವಾರ ಹಾಗೂ ಭಾನುವಾರ ಕ್ರಮವಾಗಿ 4ನೇ ಶನಿವಾರದ ಮತ್ತು ವಾರದ ರಜೆ ಹಿನ್ನೆಲೆ ಸಿಬ್ಬಂದಿಗಳ ಅಲಭ್ಯದಿಂದ ಸರ್ವೆ ನಡೆಸಲಾಗುತ್ತಿಲ್ಲ. ಸೋಮವಾರದಿಂದ ಆಯಾ ವಲಯದಲ್ಲೇ ವಲಯ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಂತ್ರಸ್ತ ಕುಟುಂಬಗಳ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಕೇಂದ್ರ ಕಚೇರಿಗೆ ತಲುಪಿಸಬೇಕಾಗುತ್ತದೆ. ಕೇಂದ್ರ ಕಚೇರಿಯಿಂದ ಒಪ್ಪಿಗೆ ದೊರೆಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳೇ ಪರಿಹಾರವನ್ನು ವಿತರಿಸಬಹುದು ಎಂದು ಮೌಖಿಕ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

25-30 ಸಾವಿರ ರೂ. ನೆರವು?:

ಮಳೆಯಿಂದ ಸುಮಾರು 1 ಸಾವಿರ ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿರಬಹುದು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಈ ಸಂಖ್ಯೆಯಲ್ಲಿ ವ್ಯತ್ಯಾಸವಾದರೂ, ಅಷ್ಟೂ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಸಿಎಂ ನಗರ ಪ್ರದಕ್ಷಿಣೆ ಮಾಡಿದ ವೇಳೆ ಜಯನಗರದ ಗುರಪ್ಪನಪಾಳ್ಯದ ಸಂತ್ರಸ್ತರು ತಮಗೆ 1 ಲಕ್ಷ ರೂ. ನೆರವು ನೀಡಲು ಕೋರಿದ್ದರು. ಆದರೆ, ಎನ್‌ಡಿಆರ್‌ಎ್ ಮಾರ್ಗಸೂಚಿ ಅನ್ವಯ ನಷ್ಟವಾದ ಮೊತ್ತದ ಅರ್ಧದಷ್ಟು ಪರಿಹಾರವಾಗಿ ನೀಡಬಹುದು ಎಂಬ ನಿಯಮ ಇದೆ. ಹಾಗಾಗಿ ಗರಿಷ್ಠ 50 ಸಾವಿರ ರೂ. ಒಳಗೆ 25-30 ಸಾವಿರ ರೂ. ಪರಿಹಾರ ಪ್ರತಿ ಕುಟುಂಬಕ್ಕೆ ನೀಡುವ ಆಲೋಚನೆ ಇದೆ. ನಾಲ್ಕೈದು ವರ್ಷಗಳ ಹಿಂದೆ ಮಡಿವಾಳ ಕೆರೆ ಸಮೀಪದ ಬಡಾವನೆಗಳ ಮನೆಗಳಿಗೆ ನೀರು ನುಗ್ಗಿದ ವೇಳೆ ತಲಾ 25 ಸಾವಿರ ರೂ. ನೆರವು ವಿತರಿಸಲಾಗಿತ್ತು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net