280 ಬಾರಿ 47 ಜನರು ಹಾವು ಕಡಿತಕ್ಕೆ ಸಾವು!? 11 ಕೋಟಿ 26 ಲಕ್ಷ ರೂ. ಪಂಗನಾಮ; ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು | Snake Bite Scam

ವಿಜಯವಾಣಿ - 2025-05-22T212712.165
Published on

Snake Bite Scam: ಇದೊಂದು ವಿಚಿತ್ರ ಘಟನೆ ಎಂದರೆ ಖಂಡಿತ ತಪ್ಪಾಗಲಾರದು. 47 ಜನರು 280 ಬಾರಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ ಎಂಬ ಬಿಂಬಿಸಿ, ಸರ್ಕಾರದಿಂದ ಬರುವ 4 ಲಕ್ಷ ರೂ.ಗಳ ಪರಿಹಾರ ಹಣವನ್ನು ನುಂಗಿರುವುದು ಇದೀಗ ಕಂದಾಯ ಮತ್ತು ಲೆಕ್ಕಪತ್ರ ಇಲಾಖೆಯ ತನಿಖೆಯಲ್ಲಿ ಬಟಾಬಯಲಾಗಿದೆ. ಈ ಅಚ್ಚರಿ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ವರದಿಯಾಗಿದೆ.

"ಇಂಡಿಯಾ ಟುಡೇ" ವರದಿ ಪ್ರಕಾರ, ಒಬ್ಬರ ಹೆಸರಿನಲ್ಲಿ ಪ್ರತಿ ಬಾರಿಯೂ 4 ಲಕ್ಷ ರೂ. ಪರಿಹಾರ ಹಣವನ್ನು ಪಡೆದ ಆಸ್ಪತ್ರೆ ಸಿಬ್ಬಂದಿಗಳು, ಮೊತ್ತದ ಹಣವನ್ನು ತಮ್ಮಲ್ಲೇ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಮೃತ 47 ವ್ಯಕ್ತಿಗಳು 280 ಬಾರಿ ಹಾವಿನ ಕಡಿತ ಮತ್ತು ಇತರೆ ಕಾರಣಗಳಿಂದಾಗಿ ಅಕಾಲಿಕ ಸಾವನ್ನಪ್ಪಿರುವುದಾಗಿ ವರದಿ ಸಲ್ಲಿಸಿರುವ ಆರೋಪಿಗಳು, ಮೃತರ ಕುಟುಂಬಕ್ಕೆಂದು ಬಂದ ಲಕ್ಷಗಟ್ಟಲೇ ಪರಿಹಾರ ಹಣವನ್ನು ಗುಳುಂ ಮಾಡಿದ್ದಾರೆ. ಒಟ್ಟು 11 ಕೋಟಿ 26 ಲಕ್ಷ ರೂ.ಗಳ ಭ್ರಷ್ಟಾಚಾರ ನಡೆದಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಕಂದಾಯ ಮತ್ತು ಲೆಕ್ಕಪತ್ರ ಇಲಾಖೆಯ ತನಿಖೆಯಲ್ಲಿ ಈ ಸ್ಫೋಟಕ ಸತ್ಯ ಬಯಲಾಗಿದ್ದು, ಪ್ರಕರಣದಲ್ಲಿ 37 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಮಾಸ್ಟರ್ ಮೈಂಡ್ ಸೇರಿದಂತೆ 21 ಮಂದಿಯನ್ನು ಈಗಾಗಲೇ ಖಾಕಿ ಪಡೆ ಬಂಧಿಸಿದೆ. ಪರಿಹಾರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಘಟನೆಗಳು 2019-2022ರ ಅವಧಿಯಲ್ಲಿ ನಡೆದಿದ್ದು, ನವೆಂಬರ್ 2022ರಲ್ಲಿ ಕಂದಾಯ ಇಲಾಖೆಯ ಲೆಕ್ಕಪರಿಶೋಧನೆಯ ಸಮಯದಲ್ಲಿ ಬಹಿರಂಗಗೊಂಡಿವೆ.

"ಹಾವು ಕಡಿತ ಅಥವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಸಂಬಂಧಿಕರಿಗೆ ಪರಿಹಾರ ಮೊತ್ತವನ್ನು ಸರ್ಕಾರ ಘೋಷಿಸುತ್ತದೆ. ಇದನ್ನೇ ತಮ್ಮ ಅಡ್ಡದಾರಿಯ ಆದಾಯ ಮೂಲವಾಗಿ ಮಾಡಿಕೊಂಡ ಕಿಡಿಗೇಡಿಗಳು, ಇಲ್ಲಿಯವರೆಗೆ ಬರೋಬ್ಬರಿ 11 ಕೋಟಿ 26 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾರೆ. ಇದಲ್ಲದೇ 47 ಜನರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ" ಎಂದು ಖಜಾನೆ ಮತ್ತು ಲೆಕ್ಕಪತ್ರ ಇಲಾಖೆಯ ತನಿಖಾಧಿಕಾರಿ ರೋಹಿತ್ ಸಿಂಗ್ ಕೌಶಲ್ ಹೇಳಿದ್ದಾರೆ.

"ನಕಲಿ ದಾಖಲೆಗಳನ್ನು ಬಳಸಿಕೊಂಡು ಯಾರ ಹೆಸರಿನ ಮೇಲೆ ಹಣವನ್ನು ಮಂಜೂರು ಮಾಡಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ಅಸಲಿಗೆ ಆ ಹೆಸರಿನ ವ್ಯಕ್ತಿಗಳು ಸತ್ತಿದ್ದಾರೆಯೇ ಅಥವಾ ಜೀವಂತವಾಗಿದ್ದಾರೆಯೇ ಎಂಬುದು ಇನ್ನೂ ತಿಳಿದಿಲ್ಲ. ಕಾರಣ, ಮರಣೋತ್ತರ ಪರೀಕ್ಷೆಯ ವರದಿಗಳು ಮತ್ತು ಮರಣ ಪ್ರಮಾಣಪತ್ರಗಳಿಗಾಗಿ ಪದೇ ಪದೇ ಅರ್ಜಿ ಸಲ್ಲಿಸಿದ್ದೇ ಆದರೂ ಇಲ್ಲಿಯವರೆಗೂ ಅದ್ಯಾವುದೂ ಲಭ್ಯವಾಗಿಲ್ಲ. ನಾವು ತನಿಖಾ ವರದಿಯನ್ನು ಸರ್ಕಾರ ಮತ್ತು ಸಿಯೋನಿ ಕಲೆಕ್ಟರ್‌ಗೆ ಕಳುಹಿಸಿದ್ದೇವೆ" ಎಂದು ಕೌಶಲ್ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net