ತಂಡದಲ್ಲಿ ಅರ್ಧಕ್ಕೆ ಅರ್ಧ...! ಇದು ಮುಂಬೈ ಇಂಡಿಯನ್ಸ್ ಗೆಲುವಿಗೆ ಕಾರಣ; ಮಾಜಿ ಕ್ರಿಕೆಟಿಗ ಗುಣಗಾನ | Mumbai Indians

ವಿಜಯವಾಣಿ - 2025-05-22T163701.349
Published on

Mumbai Indians: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ ದ್ವಿತೀಯ ಇನ್ನಿಂಗ್ಸ್​ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನೇ ನೀಡಿದೆ. ಈ ಹಿಂದೆ ಗೆಲುವಿನ ರೇಸ್​ನಿಂದ ದೂರವಿದ್ದ ತಂಡಗಳು ಇದೀಗ ಪ್ಲೇಆಫ್​ನತ್ತ ದಾಪುಗಾಲಿಟ್ಟಿರುವುದು ನೋಡುಗರ ಹುಬ್ಬೇರಿಸಿದೆ. ನಿನ್ನೆ (ಮೇ.21) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯದಲ್ಲಿ ಎಂಐ ಬರೋಬ್ಬರಿ 59 ರನ್​ಗಳಿಂದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ತನ್ನ ಪ್ಲೇಆಫ್​ ಕನಸನ್ನು ನನಸಾಗಿಸಿಕೊಂಡಿದೆ.

ಐಪಿಎಲ್ ಆರಂಭದ ಪಂದ್ಯದಲ್ಲೇ ಸಿಎಸ್​ಕೆ ಎದುರು ಮಂಡಿಯೂರಿದ್ದ ಮುಂಬೈ ಇಂಡಿಯನ್ಸ್ ಮೊದಲ 7 ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿತ್ತು. ಅದಾದ ನಂತರ ಸರಣಿ ಗೆಲುವಿನ ಮೂಲಕ ಇದೀಗ ಸಖತ್ ಕಮ್​ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ತಂಡ, ಒಂದೊಂದು ಪಂದ್ಯದಲ್ಲಿಯೂ ತಮ್ಮ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಇದೀಗ ಪ್ಲೇಆಫ್​ಗೆ ಲಗ್ಗೆಯಿಟ್ಟಿರುವ ಮುಂಬೈ ಪಡೆ ಕುರಿತು ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗು ಸಿಧು ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ಗೆಲುವಿಗೆ ಇದೇ ಕಾರಣ

"ಒಂದು ಬಾರಿ ಮುಂಬೈ ಇಂಡಿಯನ್ಸ್ ಗೆಲ್ಲಲು ಪ್ರಾರಂಭಿಸಿದರೆ ಮುಂದೆ ಅವರನ್ನು ತಡೆಯುವುದು ಅಷ್ಟು ಸುಲಭವಲ್ಲ. ಆ ತಂಡ ಮತ್ತಷ್ಟು ಶಕ್ತಿಶಾಲಿ ಆದಂತೆ. ಕಳೆದ 8 ಪಂದ್ಯಗಳನ್ನು ಸತತವಾಗಿ ಗೆದ್ದು ಬೀಗಿರುವ ಮುಂಬೈ ಇಂಡಿಯನ್ಸ್, ಈ ಬಾರಿಯ ಟ್ರೋಫಿ ಎತ್ತಿಹಿಡಿಯುವ ಮಹಾದಾಸೆ ಹೊಂದಿದೆ. ಇಂಥಾ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಮುಂಬೈ ಇಂಡಿಯನ್ಸ್​ಗೆ ಮಾತ್ರ ಇರೋದು. ಟೀಮ್ ಇಂಡಿಯಾದ ಅರ್ಧ ಆಟಗಾರರು ಮುಂಬೈ ಫ್ರಾಂಚೈಸಿಗೆ ಆಡುತ್ತಿದ್ದಾರೆ" ಎಂದು ಸಿಧು ಗುಣಗಾನ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net