ಲೈಂಗಿಕ ದೌರ್ಜನ್ಯ, ಕೊಲೆ.. ಇತರೆ ದೇಶಗಳ ಜೈಲಿನಲ್ಲಿ 23,000ಕ್ಕೂ ಹೆಚ್ಚು ಪಾಕ್​ ಅಪರಾಧಿಗಳು! ಇದು ಪಾಕಿಸ್ತಾನಿಗಳ ಕ್ರೈಮ್​ ಕಥೆ | Pakistanis Jailed

ವಿಜಯವಾಣಿ - 2025-05-19T211516.654
Published on

Pakistanis Jailed: ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದು, ಒಟ್ಟು 23 ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಗಳು ಜಗತ್ತಿನ ಹಲವು ದೇಶಗಳ ಜೈಲಿನಲ್ಲಿ ಅಪರಾಧಿಗಳಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರೆಲ್ಲರೂ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಅಚ್ಚರಿ ವಿಷಯವನ್ನು ತಿಳಿಸಿದೆ.

ಪ್ರಸ್ತುತ 23,456 ಪಾಕಿಸ್ತಾನಿಗಳು ವಿದೇಶಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಮಾಹಿತಿ ನೀಡಿದೆ. ಇವರಲ್ಲಿ 12,156 ಮಂದಿ ಸೌದಿ ಅರೇಬಿಯಾ ಜೈಲಿನಲ್ಲಿದ್ದಾರೆ. ಕೆಳಮನೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವನ್ನು ಮುನ್ನೆಲೆಗೆ ತರಲಾಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ಎರಡನೇ ಅತಿ ಹೆಚ್ಚು ಪಾಕಿಸ್ತಾನಿ ಖೈದಿಗಳನ್ನು ಹೊಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಇಲ್ಲಿನ ಜೈಲುಗಳಲ್ಲಿ 5,292 ಪಾಕಿಸ್ತಾನಿಗಳಿದ್ದಾರೆ. ಚೀನಾ ಜೈಲಿನಲ್ಲಿ 400 ಮಂದಿ ಇದ್ದಾರೆ. ಅವರಲ್ಲಿ ಹೆಚ್ಚಿನವರು ಮಾದಕವಸ್ತು ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ, ದರೋಡೆ, ಕೊಲೆ ಮತ್ತು ನಕಲಿ ಕರೆನ್ಸಿ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನು ಬಹ್ರೇನ್ ಜೈಲಿನಲ್ಲಿ ಮಾದಕವಸ್ತು ಕಳ್ಳಸಾಗಣೆ, ಮಾದಕವಸ್ತು ಸಾಗಣೆ ಮತ್ತು ವಂಚನೆ ಆರೋಪ ಹೊತ್ತಿರುವ 450 ಪಾಕಿಸ್ತಾನಿಗಳು ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. 88 ಪಾಕಿಸ್ತಾನಿಗಳು ಅಫ್ಘಾನಿಸ್ತಾನದಲ್ಲಿ ಬಂಧಿತರಾಗಿದ್ದಾರೆ. ಹೆಚ್ಚಾಗಿ ಭದ್ರತೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಎಂಬುದು ಗಮನಾರ್ಹ.

338 ಪಾಕಿಸ್ತಾನಿಗಳು ಕತಾರ್‌ನಲ್ಲಿ ಕಳ್ಳತನ, ಕೊಲೆ, ಮಾದಕವಸ್ತುಗಳು, ಹಣ ವರ್ಗಾವಣೆ, ಲೈಂಗಿಕ ದೌರ್ಜನ್ಯ ಮತ್ತು ಆರ್ಥಿಕ ವಂಚನೆ ಪ್ರಕರಣಗಳಿಂದ ಜೈಲಿನಲ್ಲಿದ್ದರೆ, ಒಮಾನ್‌ನಲ್ಲಿ 309 ಪಾಕಿಸ್ತಾನಿಗಳು ಜೈಲಿನಲ್ಲಿದ್ದಾರೆ. ಅವರೆಲ್ಲರೂ ಮಾದಕವಸ್ತು ಕಳ್ಳಸಾಗಣೆ, ಕೊಲೆ, ದರೋಡೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರು. ಮಲೇಷ್ಯಾದ ಜೈಲುಗಳಲ್ಲಿ ಒಟ್ಟು 255 ಪಾಕಿಸ್ತಾನಿಗಳಿದ್ದಾರೆ.

ಇನ್ನು ಯುರೋಪಿಯನ್ ದೇಶಗಳ ವಿಷಯಕ್ಕೆ ಬಂದರೆ, ಆಸ್ಟ್ರಿಯಾದಲ್ಲಿ ಹಲವಾರು ಅಪರಾಧಗಳನ್ನು ಎಸಗಿದ್ದಕ್ಕಾಗಿ ಪಾಕಿಸ್ತಾನಿಗಳನ್ನು ಬಂಧಿಸಲಾಗಿದೆ. ಪಾಕಿಸ್ತಾನಿಗಳು ಲೈಂಗಿಕ ದೌರ್ಜನ್ಯ, ಅಕ್ರಮ ಪ್ರವೇಶ, ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣಗಳಿಗೆ ಶಿಕ್ಷೆಗೊಳಗಾಗಿದ್ದಾರೆ. ಹಲವರನ್ನು ನಾರ್ವೆಯಲ್ಲಿಯೂ ಜೈಲಿನಲ್ಲಿಡಲಾಗಿದೆ. ಇಬ್ಬರು ಫಿನ್‌ಲ್ಯಾಂಡ್‌ ಸೆರೆಮನೆಯಲ್ಲಿದ್ದಾರೆ. ಫ್ರಾನ್ಸ್‌ನಲ್ಲಿ 168, ಜರ್ಮನಿಯಲ್ಲಿ 94, ಕೆನಡಾದಲ್ಲಿ 9 ಮತ್ತು ಡೆನ್ಮಾರ್ಕ್‌ನಲ್ಲಿ 27 ಜನರನ್ನು ಬಂಧಿಸಲಾಗಿದೆ.

ಅಜೆರ್ಬೈಜಾನ್‌ನಲ್ಲಿ, 16 ಖೈದಿಗಳಲ್ಲಿ 11 ಮಂದಿ ಕೊಲೆ, ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಪ್ರವೇಶದಂತಹ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನೂ ಐವರು ವಿಚಾರಣೆಯಲ್ಲಿದ್ದಾರೆ. ಟರ್ಕಿಯಲ್ಲಿ, 147 ಖೈದಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. 161 ಮಂದಿ ಮಾದಕವಸ್ತು, ಮಾನವ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ವಿವಿಧ ಅಪರಾಧಗಳಿಗೆ ವಿಚಾರಣೆಯಲ್ಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net