

Rukhsar Rehman: 17ನೇ ವಯಸ್ಸಿಗೆ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಉರಿ ಸಿನಿಮಾ ಖ್ಯಾತಿಯ ರುಖ್ಸಾರ್ ರೆಹಮಾನ್, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಿನಿ ಪಯಣ ಮತ್ತು ಅದರ ಮಧ್ಯೆ ಅನುಭವಿಸಿದ ದಾಂಪತ್ಯ ಸಂಕಷ್ಟಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡು, ಇನ್ನೇನು ಸಿನಿಪ್ರಿಯರ ಮನದಲ್ಲಿ ಜಾಗ ಪಡೆಬೇಕು ಎನ್ನುವಷ್ಟರಲ್ಲಿ ಜೀವನದಲ್ಲಿ ಎದುರಾದ ಸವಾಲುಗಳು ಹೇಗೆ ತನ್ನ ಬದುಕನ್ನೇ ಬದಲಿಸಿತು ಎಂಬುದನ್ನು ನಟಿ ಬಹಿರಂಗಪಡಿಸಿದ್ದಾರೆ.
ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ರುಖ್ಸಾರ್, ಹಿಂದಿ ಚಿತ್ರಗಳಾದ 'ಪಿಕೆ', 'ಸರ್ಕಾರ್' ಮತ್ತು 'ಗಾಡ್ ತುಸ್ಸಿ ಗ್ರೇಟ್ ಹೋ' ಸೇರಿದಂತೆ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿ, ಬಾಲಿವುಡ್ ಮಂದಿಗೆ ಪರಿಚಯಗೊಂಡಿದ್ದಾರೆ. ಈ ಚಿತ್ರಗಳ ಬೆನ್ನಲ್ಲೇ ಬ್ಲಾಕ್ಬಸ್ಟರ್ 'ಉರಿ' ಸಿನಿಮಾದಲ್ಲಿ ಕಾಣಿಸಿಕೊಂಡ ರುಖ್ಸಾರ್ ರೆಹಮಾನ್, ಸಿನಿ ವೃತ್ತಿಯ ಆರಂಭದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಸಮಯದಲ್ಲೇ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿಕೊಳ್ಳುತ್ತಾರೆ. ಇಲ್ಲೇ ಆಕೆಯ ಜೀವನ ನರಕವಾಗಿದ್ದು.
'ಹ್ಯುಮನ್ಸ್ ಆಫ್ ಬಾಂಬೆ' ಜೊತೆ ಮಾತನಾಡಿದ ನಟಿ, "1992ರಲ್ಲಿ ತೆರೆಕಂಡ 'ಯಾದ್ ರಾಖೇಗಿ ದುನಿಯಾ' ಚಿತ್ರದ ಮೂಲಕ ನಾನು ಬಾಲಿವುಡ್ಗೆ ಪದಾರ್ಪಣೆ ಮಾಡಿದೆ. ಆಗ ನನಗೆ ವಯಸ್ಸು 17. ನನಗೇನೋ ಚಿತ್ರರಂಗದಲ್ಲಿ ಮುಂದುವರಿಯುವ ಮಹಾದಾಸೆಯಿತ್ತು. ಆದರೆ, ನನ್ನ ಹೆತ್ತವರಿಗೆ ಇದು ಕಿಂಚಿತ್ತು ಇಷ್ಟವಿರಲಿಲ್ಲ. ನನ್ನ ಸಿನಿ ವೃತ್ತಿಗೆ ಎಳ್ಳು-ನೀರು ಬಿಟ್ಟು, ದಾಂಪತ್ಯ ಜೀವನಕ್ಕೆ ದೂಡಿದರು. ಬಲವಂತವಾಗಿ ನನಗೆ ಇಷ್ಟವಿಲ್ಲದ ಮದುವೆ ಮಾಡಿಸಿದರು. 19ನೇ ವಯಸ್ಸಿಗೆ ನಾನು ಮಗಳು ಐಷಾಗೆ ತಾಯಿಯಾದೆ. ಈ ಸಮಯದಲ್ಲೇ ಪತಿ ತೊರೆದು ಮನೆಬಿಟ್ಟು ಹೊರಬಂದೆ" ಎಂದಿದ್ದಾರೆ.
"ಮಗಳು ಬಂದ ಮೇಲೆ ನನ್ನ ಜೀವನ ಮತ್ತೊಂದು ದಿಕ್ಕಿನತ್ತ ಚಲಿಸಲು ಶುರುವಾಯಿತು. ಬದುಕು ಹೊರಗಿನಿಂದ ಬಹಳ ಚೆನ್ನಾಗಿ ಕಾಣಿಸಿತು. ಪತಿಗೆ ಒಳ್ಳೆಯ ಪತ್ನಿಯಾಗಿ ಉಳಿಯಲು ಪ್ರಯತ್ನಿಸಿದೆ. ಆದರೆ, ದಿನ ಕಳೆದಂತೆ ನಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭಿಸಿತು. ಕಡೆಗೂ ಆ ದಾಂಪತ್ಯ ಮುರಿದುಬಿತ್ತು. 8 ತಿಂಗಳ ಮಗಳೊಂದಿಗೆ ಗಂಡನ ಮನೆ ತೊರೆಯುವ ದಿಟ್ಟ ನಿರ್ಧಾರ ಕೈಗೊಂಡೆ. ನಾನು ಮಾಡ್ತಿರೋದು ಸರೀನಾ ಎಂಬ ಗೊಂದಲದಲ್ಲೇ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ತವರಿಗೆ ಬಂದೆ. ಅಪ್ಪ ಹೆಚ್ಚೇನು ಮಾತನಾಡಲಿಲ್ಲ. ಎಲ್ಲ ಸರಿ ಹೋಗುತ್ತೆ" ಎಂದು ಭರವಸೆ ನೀಡಿದರು.
"ಬದುಕು ಕಟ್ಟಿಕೊಳ್ಳಲೇಬೇಕು, ಜೀವನ ನಡೆಸಬೇಕು ಎಂಬ ಹಸಿವಿನಿಂದ ಮಗಳನ್ನು ತಂದೆಯೊಟ್ಟಿಗೆ ಬಿಟ್ಟು, ನಾನು ಬಟ್ಟೆ ಅಂಗಡಿಯನ್ನು ತೆರೆದೆ. ಮಗಳು ಐಷಾ ಜೊತೆಗೆ ನಾನು ಕೂಡ ಬೆಳೆದು ನಿಂತೆ. ಆ ನಂತರ ಸಿನಿಮಾ ನನ್ನನ್ನು ಬಿಡಲಿಲ್ಲ. ಒಂದಷ್ಟು ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದೆ. ಜೀವನದ ಪಯಣದಲ್ಲಿ ಒಮ್ಮೆ ಹಿಂದಕ್ಕೆ ಹೋಗಿ ಬಂದರೆ ಅತೀವ ದುಃಖ ಕಾಡುತ್ತದೆ. ಒಂದು ಹಂತದಲ್ಲಿ ಇಲ್ಲಿಗೆ ಮುಗಿಯಿತು ನನ್ನ ಬದುಕು ಎಂದೇ ಭಾವಿಸಿದ್ದೆ. ಆದರೆ, ಬದುಕು ಒಂದು ತುದಿಯಿಂದ ಮತ್ತೊಂದು ತುದಿಗೆ ಕರೆದೊಯ್ಯಿತು. ಇದು ಊಹೆಗೂ ಮೀರಿದ್ದು" ಎಂದು ಹೇಳಿದ್ದಾರೆ,(ಏಜನ್ಸೀಸ್).