

ದಾಸರಹಳ್ಳಿ: ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ದಾರ್ಶನಿಕರ ತತ್ವಗಳನ್ನು, ಆಚಾರ, ವಿಚಾರಗಳನ್ನು ಕಲಿಸಬೇಕು. ಸಂಸ್ಕಾರವಂತ ಮಕ್ಕಳು ಮನೆಗೆ ಮತ್ತು ಸಮಾಜಕ್ಕೆ ಆಸ್ತಿಗಳಾಗುತ್ತಾರೆ. ದಾರ್ಶನಿಕರ ವಿಚಾರಧಾರೆ ಮಕ್ಕಳಿಗೆ ದಾರಿದೀಪಗಳಾಗಲಿ ಎಂದು ಆನೇಕಲ್ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಚಿಕ್ಕಬಾಣಾವರದ ರಾಘವೇಂದ್ರ ಬಡಾವಣೆಯ ಶ್ರೀರಾಘವೇಂದ್ರ ಪವಮಾನ ಮಂದಿರದಲ್ಲಿ ವಿಶ್ವವೀರಶೈವ ಲಿಂಗಾಯಿತ ವೇದಿಕೆ ಮತ್ತು ವೀರಶೈವ ಲಿಂಗಾಯಿತ ವೇದಿಕೆ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನೋತ್ಸವ, ವೇದಿಕೆಯ 14ನೇ ವರ್ಷದ ವಾರ್ಷಿಕೋತ್ಸವ, ಬಸವ ಜಯಂತಿ ಮತ್ತು ರೇಣುಕಾಚಾರ್ಯ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ದಿನನಿತ್ಯ ಸಂಭವಿಸುವ ಪ್ರಕ್ಷುಬ್ಧ ಅವಲಕ್ಷಣಗಳಿಗೆ ಕಡಿವಾಣ ಹಾಕಿ, ಸುಸಂಸ್ಕೃತ ಬದುಕನ್ನು ರೂಪಿಸಿಕೊಳ್ಳಲು ಧಾರ್ಮಿಕ ಕಾರ್ಯಕ್ರಮಗಳು ಮಹತ್ವಪೂರ್ಣ ಸಂದೇಶ ಕೊಡುತ್ತವೆ ಎಂದರು.
ಕ್ರಾಂತಿಯೋಗಿ ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬಸವಣ್ಣವಿಶ್ವದ ಸಾಂಸ್ಕೃತಿಕ ನಾಯಕ ಎಂದು ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ವೈ.ಬಿ.ಎಚ್ ಜಯದೇವ್ ತಿಳಿಸಿದರು.
ಸಮಾರಂಭದಲ್ಲಿ ಉಚಿತ ಲಿಂಗ ದೀಕ್ಷೆ, ಕವಿಯತ್ರಿ ಪುಷ್ಪ ಬಸವರಾಜ ಬಣಕಾರ ಅವರ ಎನ್ನೊಳಗಣ ಬಸವಪ್ರಭು ಎಂಬ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಂಗಮ ಮಠದ ಶ್ರೀ ಚನ್ನಬಸವಾನಂದ ಸ್ವಾಮೀಜಿ, ವೇದಿಕೆಯ ಕಾರ್ಯದರ್ಶಿ ಎಂ.ಎಚ್. ಪಾಟೀಲ್, ಸಮಾಜ ಸೇವಕರಾದ ಎಂ.ಬಿ. ದಯಾನಂದ್, ಎಂ.ಕೆ. ಜಗದೀಶ್, ಉತ್ತರ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ, ಲತಾ ಕುಂದರಗಿ, ಅಶೋಕ್ ಎಸ್ ಪಾಟೀಲ್, ಶಿವಗಂಗಾಧರ್, ಹನುಮಂತಪ್ಪ ಮೇಡೆಗಾರ ಮತ್ತಿತರರು ಪಾಲ್ಗೊಂಡಿದ್ದರು.