ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿರುವ ಶ್ರೀವಿನಾಯಕ ಸ್ವಾಮಿ ದೇವಾಲಯದಲ್ಲಿ 48ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಭಾನುವಾರದಿಂದ ಆರಂಭವಾಗಿರುವ ವಾರ್ಷಿಕೋತ್ಸವ ಕಾರ್ಯಕ್ರಮವು ಗುರುವಾರದವರೆಗೆ ನಡೆಯಲಿದ್ದು, ಸೋಮವಾರ ಮೂಲ ದೇವರ ಮೂರ್ತಿ ಅಷ್ಟಬಂಧ ಪ್ರತಿಷ್ಠಾಪನೆ, ನಾಗದೇವತೆಗಳಿಗೆ ಅಭಿಷೇಕ ಪೂಜೆ ನಡೆಯಿತು. ಇಂದು (ಮಂಗಳವಾರ) ಬೆಳಗಿನ ಜಾವ 48 ಸಂವತ್ಸರಗಳ ಪ್ರತಿಷ್ಠಾ ಕಳಸ ಸ್ಥಾಪನೆ ಹಾಗೂ ಮಧ್ಯಾಹ್ನ ಏಕಾದಶ ರುದ್ರಹೋಮ ಏರ್ಪಡಿಸಲಾಗಿದೆ. ಸಂಜೆ 7 ಗಂಟೆಗೆ ಸೂರ್ಯ ಆರ್ಟ್ಸ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೇ 21 (ಬುಧವಾರ) ರಂದು ವಿಶ್ವಶಾಂತಿಗಾಗಿ ಸಂಕಲ್ಪ ಮಾಡಿ ವಿನಾಯಕ ಸ್ವಾಮಿಗೆ ಶಾಂತಿಪೂಜೆ ಹಾಗೂ ಹೋಮ ನಡೆಸಲಾಗುವುದು. ಮೇ22 (ಗುರುವಾರ) ವಿಶೇಷವಾಗಿ 1008 ಲೀ. ಹಾಲು, 108 ಲೀ ಮೊಸರು, 108 ಕೆ.ಜಿ.ತುಪ್ಪ ಮತ್ತು ಜೇನುತುಪ್ಪ ಹಾಗೂ 108 ಬಗೆಯ ಹಣ್ಣಿನ ರಸಗಳಿಂದ ದೇವರಿಗೆ ಅಭಿಷೇಕ ಪೂಜೆ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿಯೊಂದಿಗೆ ಪೂಜೆ ಸಂಪನ್ನಗೊಳ್ಳಲಿದ್ದು, 10 ಸಾವಿರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಪ್ರಧಾನ ಅರ್ಚಕರಾದ ಶ್ರೀಚನ್ನವೀರ ದೇವರು ತಿಳಿಸಿದ್ದಾರೆ.