ಹಾರ್ದಿಕ್ ಇಲ್ಲದೆ ಈ ತಂಡ ಉತ್ತವಾಗಿದೆ; ಪಾಂಡ್ಯ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟಿಗ!

WhatsApp Image 2024-03-12 at 8.46.31 AM
Published on

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಗ್ರ್ಯಾಂಡ್ ಓಪನಿಂಗ್ ಇದೇ ಮಾರ್ಚ್​ 22ರಂದು ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಇದರ ಬೆನ್ನಲ್ಲೇ ಮೊದಲ 21 ದಿನಗಳು ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿರುವ ಬಿಸಿಸಿಐ, ಕಿಕ್​ಸ್ಟಾರ್ಟ್​ ಪಂದ್ಯವನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಆಯೋಜಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ.

ಒಂದೆಡೆ ಐಪಿಎಲ್​ನ 10 ತಂಡಗಳ 10 ಕ್ಯಾಪ್ಟನ್​ಗಳ ಮೇಲೆ ಭಾರೀ ಭರವಸೆ ಮತ್ತು ನಿರೀಕ್ಷೆಗಳ ಹೆಚ್ಚಾದರೂ ಸಹ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಳಿಬರುತ್ತಿರುವ ವಿಚಾರಗಳು ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬಂತೆ ಕಾಣುತ್ತಿದೆ. ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್​ ಹಣಾಹಣಿಯವರೆಗೂ ತಂದಿದ್ದ ಪಾಂಡ್ಯ ಕಳೆದ ವರ್ಷ ದಿಢೀರ್​ ಟೈಟನ್​ಗೆ ಕೈಕೊಟ್ಟು ಎಂಐ ತಂಡಕ್ಕೆ ಮತ್ತೆ ಹಿಂತಿರುಗಿದರು.

ಈ ಸಂಗತಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಮೊದಲೇನೋ ಖುಷಿ ತಂದಿತು. ಆದ್ರೆ, ತದನಂತರ ಐದು ಬಾರಿ ಐಪಿಎಲ್ ಟ್ರೋಫಿ ತಂದುಕೊಟ್ಟ ಯಶಸ್ವಿ ಕ್ಯಾಪ್ಟನ್​ ರೋಹಿತ್ ಶರ್ಮಾ ಅವರ ಸ್ಥಾನವನ್ನು ಪಾಂಡ್ಯ ಅಲಂಕರಿಸಿದರು ಎಂಬ ಸುದ್ದಿ ಕೇಳಿ ಭಾರೀ ಆಘಾತ ತಂದೊಡ್ಡಿತು. ಇಂದಿಗೂ ಈ ಶಾಕ್​ನಿಂದ ಫ್ಯಾನ್ಸ್ ಹೊರಬಂದಿಲ್ಲ ಎಂಬುದು ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಟ್ರೋಲ್​ಗಳು ಸ್ಪಷ್ಟಪಡಿಸುತ್ತಿವೆ.

ಸದ್ಯ ಈ ವಿಚಾರಗಳ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಾಡ್​ ಹಾಗ್​ ಐಪಿಎಲ್​ನಲ್ಲಿ ಹಾರ್ದಿಕ್ ಪಾತ್ರ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳನ್ನು ತೆರದಿಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡಿದ ಬ್ರಾಡ್, ಪಾಂಡ್ಯ ಇಲ್ಲದೇ ಗುಜರಾತ್ ಟೈಟನ್ಸ್​ ತಂಡ ಉತ್ತಮವಾಗಿಯೇ ಇದೆ ಎಂದಿದ್ದಾರೆ.

"ನನಗೇನೋ ತಂಡದಿಂದ ಹಾರ್ದಿಕ್​ ಹೊರನಡೆದಿರುವುದು ಗುಜರಾತ್ ಟೈಟನ್ಸ್​ಗೆ ದೊಡ್ಡ ಲಾಸ್​ ಇಲ್ಲ. ಹೌದು, ಹಾರ್ದಿಕ್ ಒಬ್ಬ ಉತ್ತಮ ಆಲ್​-ರೌಂಡರ್​, ಮಧ್ಯಮ ಕ್ರಮಾಂಕದಲ್ಲಿ ಚೆನ್ನಾಗಿ ಆಡುತ್ತಾರೆ. ಆದರೂ ಸಹ ಜಿಟಿ ಪಾಂದ್ಯ ಅವರ ಅನುಪಸ್ಥಿತಿಯನ್ನು ಕವರ್​ ಮಾಡಿಕೊಳ್ಳಬಹುದು. ಟೈಟನ್ಸ್​ನಲ್ಲಿ ಉತ್ತಮ ಬೌಲಿಂಗ್ ದಾಳಿಯಿದೆ. ಎಂದಿಗೂ ಬೌಲಿಂಗ್ ವಿಭಾಗವೂ ಪಾಂಡ್ಯ ಮೇಲೆ ಅವಲಂಬಿತರಾಗಿರಲಿಲ್ಲ. ಹಾಗಾಗಿ, ನನ್ನ ಪ್ರಕಾರ ಗುಜರಾತ್ ಹಾರ್ದಿಕ್ ಇಲ್ಲದೆ ಉತ್ತಮವಾಗಿದೆ" ಎಂದರು.

"ಇನ್ನು ಇಂಡಿಯನ್​ ಆಲ್​-ರೌಂಡರ್​ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡುವುದು ಮುಂಬೈಗೆ ಬೆಸ್ಟ್​ ಆಯ್ಕೆ. ನನ್ನ ಪ್ರಕಾರ ಹಾರ್ದಿಕ್ ಕೂಡ ಅದೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡ್ತಾರೆ. ಮುಂಬೈ ತಂಡದೊಂದಿಗೆ ಹಾರ್ದಿಕ್​ ಮತ್ತಷ್ಟು ಬೆಸ್ಟ್​ ಆಗಿ ಹೊರಹೊಮ್ಮಲಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net