

ನವದೆಹಲಿ: ಕಳೆದ ಎರಡು ತಿಂಗಳಿನಿಂದ ಸತತವಾಗಿ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿರುವ ಐಪಿಎಲ್ 17ನೇ ಆವೃತ್ತಿ ಇದೀಗ ಕೊನೆಯ ಹಂತಕ್ಕೆ ತಲುಪಿದ್ದು, ಇಂದಿನ ಫೈನಲ್ ಮ್ಯಾಚ್ ಮೂಲಕ ಪೂರ್ಣವಿರಾಮ ಪಡೆಯಲಿದೆ. ಇನ್ನು ಕ್ವಾಲಿಫೈರ್ 2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯ ಕೈಚೆಲ್ಲಿದ ರಾಜಸ್ಥಾನ ರಾಯಲ್ಸ್ ಪರ ಬೌಲರ್ ಸಂದೀಪ್ ಶರ್ಮಾ, ಅದ್ಭುತ ಬೌಲಿಂಗ್ ದಾಳಿ ಮಾಡುವ ಮೂಲಕ ಕ್ರಿಕೆಟ್ ದಿಗ್ಗಜರ ಗಮನಸೆಳೆದರು. ಈ ಬಗ್ಗೆ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯಿಸಿದ್ದಾರೆ.
"ಈ ಬಾರಿಯ ಲೀಗ್ನಲ್ಲಿಯೂ ರಾಜಸ್ಥಾನ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ ಸಂದೀಪ್ ಶರ್ಮಾ, ಹಲವು ಪಂದ್ಯಗಳನ್ನು ರಾಯಲ್ಸ್ಗೆ ಗೆಲ್ಲಿಸಿಕೊಟ್ಟಿದ್ದಾರೆ. ರೋಚಕ ಗೆಲುವುಗಳಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸಂದೀಪ್ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಸಿಕ್ಕಿದೆ. ಆದ್ರೆ, ಅದೃಷ್ಟವಿಲ್ಲದ ಸಂದೀಪ್ಗೆ ಟೀಂ ಇಂಡಿಯಾದ ಆಯ್ಕೆಗಾರರು ಹೆಚ್ಚಿನ ಅವಕಾಶಗಳನ್ನು ಕೊಡಲಿಲ್ಲ" ಎಂದು ನವಜೋತ್ ಸಿಂಗು ಸಿಧು ಹೇಳಿದ್ದಾರೆ.
"ಕ್ವಾಲಿಫೈರ್ 2 ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ ಅವರಿಗೆ ಪರ್ಫೆಕ್ಟ್ ಯಾರ್ಕರ್ ಹಾಕಿ, ವಿಕೆಟ್ ಪಡೆದ ಸಂದೀಪ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಖರ್ ಯೂನಿಸ್ ಮತ್ತು ವಾಸಿಮ್ ಅಕ್ರಮ್ ಅವರ ಬೌಲಿಂಗ್ ದಾಳಿಯನ್ನು ನೆನಪಿಸುತ್ತಾರೆ. ಈ ದಿಗ್ಗಜ ಬೌಲರ್ಗಳಂತೆಯೇ ಸಂದೀಪ್ ಶರ್ಮಾ ಕೂಡ ಬೌಲ್ ಮಾಡುವುದು ನಿಜಕ್ಕೂ ಮೆಚ್ಚುವಂತದ್ದು. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಚಾಂಪಿಯನ್ಸ್ಗಳನ್ನೇ ಪರದಾಡುವಂತೆ ಮಾಡಿದರು" ಎಂದರು.
"ಸಂದೀಪ್ ಮತ್ತು ಅಕ್ರಮ್ ಬೌಲಿಂಗ್ ದಾಳಿಯಲ್ಲಿ ಸಾಮ್ಯತೆ ಇದೆ. ಶರ್ಮಾರ ಬೌಲಿಂಗ್ನಲ್ಲಿ ಬಹಳಷ್ಟು ವೇರಿಯೇಷನ್ಗಳಿವೆ. ಅಂದಿನ ಸಮಯದಲ್ಲಿ ವಾಸಿಮ್ ಅವರ ಆಕ್ರಮಣಕಾರಿ ಬೌಲಿಂಗ್ ಎದುರಾಳಿಗಳಲ್ಲಿ ಬಹಳ ಚಿಂತಿಸುವಂತೆ ಮಾಡುತ್ತಿತ್ತು. ಇದೀಗ ಅದೇ ರೀತಿ ಸಂದೀಪ್ ಕೂಡ ಮಾಡುತ್ತಿದ್ದಾರೆ" ಎಂದು ಸಿಧು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).