ಅಂದು ಇರ್ಫಾನ್​ ಸರಿಯಿದ್ದಿದ್ದರೇ, ಧೋನಿ 2 ಸಿಕ್ಸ್​ ಬಾರಿಸಲು ಸಾಧ್ಯವೇ ಇರಲಿಲ್ಲ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ವರುಣ್

WhatsApp Image 2024-05-01 at 4.44.49 PM
Published on

2008ರಲ್ಲಿ ಶುರುವಾದ ಐಪಿಎಲ್​ನ ಮೊದಲ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಆಲ್​ರೌಂಡರ್ ಆಗಿ ತಮ್ಮ ತಂಡಕ್ಕೆ ಉತ್ತಮ ಕೊಡುಗೆ ನೀಡಿ, ಮಿಂಚಿದ್ದರು. 2010ರ ಐಪಿಎಲ್​ನ 54ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಧೋನಿ ಸಹಾಯದಿಂದ ಆ ಪಂದ್ಯವನ್ನು ವಶಪಡಿಸಿಕೊಂಡಿತು. ಅಸಲಿಗೆ ಆ ಮ್ಯಾಚ್​ನಲ್ಲಿ  ಧೋನಿ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾರತ ತಂಡದ ಮಾಜಿ ವೇಗಿ ವರುಣ್ ಆರೋನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಅಂದು ಧರ್ಮಶಾಲಾದಲ್ಲಿ ಸಿಎಸ್​ಕೆ ಮತ್ತು ಪಂಜಾಬ್​ ವಿರುದ್ಧದ ಪಂದ್ಯದಲ್ಲಿ, ಚೆನ್ನೈ 193 ರನ್​ಗಳನ್ನು ಚೇಸ್​ ಮಾಡುತ್ತಿತ್ತು. ಈ ವೇಳೆ ಕಡೆಯ ಓವರ್​ನಲ್ಲಿ ಗೆಲ್ಲಲು 16 ರನ್​ಗಳ ಅಗತ್ಯವಿತ್ತು. ಆಗ ಸಿಎಸ್​ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕ್ರೀಸ್​ನಲ್ಲಿದ್ದರು. ಗೆಲುವಿಗೆ ಬೇಕಿದ್ದ 16 ರನ್​ ಹೊಡೆಯಲು ಮಾಹಿ ಒಂದೆಡೆ ಪ್ಲಾನ್​ ಮಾಡುತ್ತಿದ್ದರು. ಮತ್ತೊಂದೆಡೆ ಅಂತಿಮ ಓವರ್​ನ ಮಾಡಲು ಮುಂದಾಗಿದ್ದು, ಇರ್ಫಾನ್ ಪಠಾಣ್. ಈ ರೋಚಕ ಮ್ಯಾಚ್​​ ಪ್ಲೇ-ಆಫ್​​ ಪಂದ್ಯವಾಗಿತ್ತು ಎಂಬುದೇ ವಿಶೇಷ ಎಂದು ವರುಣ್ ಆರೋನ್ ಹೇಳಿದ್ದಾರೆ.

ಅಜೇಯ 54 ರನ್​ ಗಳಿಸಿ, ಕ್ರೀಸ್​ನಲ್ಲಿ ನಿಂತಿದ್ದ ಧೋನಿ, ಗೆಲುವಿನ ಪತಾಕೆ ಹಾರಿಸಲು ಕಡೆಯ ಓವರ್​ನಲ್ಲಿ 16 ರನ್​ ಸಿಡಿಸಬೇಕಿತ್ತು. ಬೌಲ್ ಮಾಡಲು ಇರ್ಫಾನ್ ಪಠಾನ್ ಸಜ್ಜಾಗಿದ್ದೇ ಆದರೂ ಅಂದು ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. ಈ ಕಾರಣವನ್ನು ನೆಪ ಮಾಡದ ಅವರು, ತಮ್ಮ ತಂಡದ ಗೆಲುವಿಗಾಗಿ ಶ್ರಮಮೀರಿ ಪ್ರಯತ್ನಿಸಿದರು. ಆದರೆ, ಅಂತಿಮವಾಗಿ ಧೋನಿ ಎರಡು ಸಿಕ್ಸ್ ಮತ್ತು ಒಂದು ಫೋರ್ ಹೊಡೆಯುವ ಮೂಲಕ ಪಂದ್ಯ ಗೆದ್ದರು ಎಂದು ವರುಣ್ ಹೇಳಿದ್ದಾರೆ.

ಹುಷಾರಿಲ್ಲದೇ ಹೋದರು ಕಡೆಯ ಓವರ್​ ಬೌಲ್ ಮಾಡ್ತೀನಿ ಎಂದು ಮುಂದೆ ಬಂದ ಪಠಾಣ್, ಧೋನಿ ಅವರನ್ನು ಕಟ್ಟಿಹಾಕಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಯಿತು. ಒಂದಂತು ಸತ್ಯ, ಅಂದು ಅವರ ಆರೋಗ್ಯದ ಸ್ಥಿತಿ ಚೆನ್ನಾಗಿದ್ದಿದ್ದರೆ, ಖಂಡಿತ ಎಂ.ಎಸ್. ಧೋನಿ ಎರಡು ಸಿಕ್ಸರ್ ಹೊಡೆಯಲು ಸಾಧ್ಯವೇ ಆಗ್ತಿರಲಿಲ್ಲ ಎಂದು ವರುಣ್ ಆರೋನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಐಪಿಎಲ್​ನ 17ನೇ ಆವೃತ್ತಿಯಲ್ಲಿ ಸಿಎಸ್​ಕೆ ಪರವಾಗಿ ಆಡುತ್ತಿರುವ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ತಮ್ಮ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಎಂದಿನಂತೆ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net