

ಚೆನ್ನೈ: ಕ್ರಿಕೆಟ್ ಲೋಕದ ಮಾಂತ್ರಿಕ, ದಿಗ್ಗಜ, ಜಗತ್ತು ಕಂಡ ಶ್ರೇಷ್ಠ ನಾಯಕ ಎಂ.ಎಸ್. ಧೋನಿ ಇದೀಗ ಐಪಿಎಲ್ನ 17ನೇ ಆವೃತ್ತಿಯಲ್ಲಿ ತಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದು, ನಾಯಕನ ಸ್ಥಾನವನ್ನು ರುತುರಾಜ್ ಗಾಯಕ್ವಾಡ್ಗೆ ಕೊಟ್ಟು, ಎಲ್ಲರಂತೆ ನಾನು ಕೂಡ ತಂಡದ ಒಬ್ಬ ಸದಸ್ಯನಷ್ಟೇ ಎಂದು ಸರಳತೆ ಮೆರೆಯುತ್ತಿರುವ ಧೋನಿ, ಇದೀಗ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ದಾಖಲೆಗಳ ಸರದಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ನಿನ್ನೆ (ಏ.28) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ಧ 78 ರನ್ಗಳ ಅಂತರದಿಂದ ಸಿಎಸ್ಕೆ ಭರ್ಜರಿ ಜಯ ಸಾಧಿಸಿತು. ಬಹಳ ರೋಚಕವಾಗಿ ಮೂಡಿಬಂದ ಈ ಮ್ಯಾಚ್ನಲ್ಲಿ, ಚೆನ್ನೈ ತಂಡದ ಬೌಲಿಂಗ್ ದಾಳಿಗೆ ಸನ್ರೈಸರ್ಸ್ ಸಂಪೂರ್ಣ ತತ್ತರಿಸಿ ಹೋಯಿತು. ಭಾರೀ ಅಂತರದಿಂದ ಗೆಲುವು ದಾಖಲಿಸಿದ ಸಿಎಸ್ಕೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಿಂದ ನೇರವಾಗಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇದು ತಂಡಕ್ಕೆ ಮತ್ತಷ್ಟು ಬಲ ತುಂಬಿದೆ.
ಇನ್ನು ಈ ಪಂದ್ಯದಲ್ಲಿನ ಗೆಲುವು ಎಂ.ಎಸ್. ಧೋನಿ ಅವರ 150ನೇ ಜಯವಾಗಿದ್ದು, ಒಂದೇ ಫ್ರಾಂಚೈಸಿಯಡಿ ಆಡಿದ ಪಂದ್ಯಗಳಲ್ಲಿ ಸಾಧಿಸಿದ 150ನೇ ವಿಕ್ಟರಿ ಇದಾಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕ್ಯಾಪ್ಟನ್ ಕೂಲ್, ಟಿ-20 ಟೂರ್ನಿಯಲ್ಲಿ ಈ ವಿನೂತನ ರೆಕಾರ್ಡ್ ಸೆಟ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಂಗತಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದು, ಧೋನಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
2008ರಲ್ಲಿ ಪ್ರಾರಂಭವಾದ ಐಪಿಎಲ್ ಲೀಗ್ನಿಂದ ಇಲ್ಲಿಯವರೆಗೆ 259 ಪಂದ್ಯಗಳನ್ನು ಆಡಿರುವ ಎಂ.ಎಸ್. ಧೋನಿ, ಐದು ಬಾರಿ ತಮ್ಮ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ಕ್ಯಾಪ್ಟನ್ ಎಂಬ ಪಟ್ಟ ಸ್ವೀಕರಿಸಿದ್ದು, ಇದೇ ಮೊದಲ ಸೀಸನ್ನಲ್ಲಿ ನಾಯಕನ ಸ್ಥಾನದಿಂದ ಸಂಪೂರ್ಣವಾಗಿ ದೂರ ಉಳಿದಿರುವ 'ಮಿಸ್ಟರ್ ಕೂಲ್', ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ಗೆ ನಾಯಕನ ಸ್ಥಾನವನ್ನು ಹಸ್ತಾಂತರಿಸಿದರು,(ಏಜೆನ್ಸೀಸ್).