

ಬೆಂಗಳೂರು: ಮೇ 18ರಂದು ನಗರದ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಇಡೀ ಕ್ರಿಕೆಟ್ ಜಗತ್ತೇ ಈ ಪಂದ್ಯಕ್ಕಾಗಿ ಕಾಯುತ್ತಿದೆ. ಇದು ಪ್ರಸಕ್ತ ಐಪಿಎಲ್ ಟೂರ್ನಿಯ ಅನಧಿಕೃತ ನಾಕೌಟ್ ಪಂದ್ಯವಾಗಿ ಹೊರಹೊಮ್ಮಿದೆ. ಪ್ಲೇಆಫ್‌ಗೆ ಪ್ರವೇಶ ಪಡೆಯಲು ಗೆಲ್ಲಲೇಬೇಕಾದ ಪಂದ್ಯವಾದ್ದರಿಂದ, ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಯಾವುದೇ ಬೆಲೆ ತೆತ್ತಾದರೂ ಗೆಲ್ಲುವ ಆಸೆಯೊಂದಿಗೆ ಅಖಾಡಕ್ಕೆ ಇಳಿಯಲಿವೆ. ದಿಗ್ಗಜ ಆಟಗಾರರಾದ ಧೋನಿ ಮತ್ತು ಕೊಹ್ಲಿ ನಡುವಿನ ಪೈಪೋಟಿಯಿಂದಾಗಿ ಕ್ರಿಕೆಟ್ ಅಭಿಮಾನಿಗಳು ಕೂಡ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಆದರೆ, ಈ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಮಾತ್ರ ಆ ಓರ್ವ ಆಟಗಾರನಿಗೆ ಹೆದರಿದಂತಿದೆ. ಹಸಿದ ಸಿಂಹದಂತೆ ಬೇಟೆಯಾಡುವ ಈ ರಣಬೇಟೆಗಾರನಿಗೆ ಸಿಎಸ್‌ಕೆ ಹೆದರುತ್ತಿದೆ. ಅಷ್ಟಕ್ಕೂ ಆ ಬ್ಯಾಟಿಂಗ್ ಬೀಸ್ಟ್ ಯಾರು ಎಂಬುದನ್ನು ನಾವೀಗ ನೋಡೋಣ.
ಮೊದಲ 8 ಪಂದ್ಯಗಳಲ್ಲಿ ಆರ್‌ಸಿಬಿ 7 ಪಂದ್ಯಗಳಲ್ಲಿ ಸೋತಿದ್ದು ಗೊತ್ತೇ ಇದೆ. ಆ 8 ಪಂದ್ಯಗಳಲ್ಲಿ ಅವರು ಸಾಕಷ್ಟು ಪ್ರಯೋಗ ಮಾಡಿದೆ. ತಂಡದಲ್ಲಿ ಹಲವು ಆಟಗಾರರನ್ನು ಬದಲಾಯಿಸಿದೆ. ಸ್ಟಾರ್ ಆಟಗಾರರು ಕೂಡ ಹೊರಗುಳಿದಿದ್ದರು. ನಾಯಕ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಹೊರತುಪಡಿಸಿ, ಉಳಿದೆಲ್ಲ ಆಟಗಾರರು ಆಡುವ ಹನ್ನೊಂದರ ಬಳಗಕ್ಕೆ ಬಂದು ಹೋಗಿದ್ದಾರೆ. 9ನೇ ಪಂದ್ಯದಿಂದ ಆರ್‌ಸಿಬಿ ತಂಡ ಸ್ಥಿರತೆ ಕಾಯ್ದುಕೊಂಡಿದೆ. ಅಲ್ಲಿಂದ ಸತತವಾಗಿ 5 ಪಂದ್ಯಗಳನ್ನು ಗೆದ್ದಿದೆ. ಗ್ಲೇನ್ ಮ್ಯಾಕ್ಸ್‌ವೆಲ್ ಪ್ಲೇಸ್‌ನಲ್ಲಿ ತಂಡಕ್ಕೆ ಸೇರ್ಪಡೆಯಾದ ವಿಲ್ ಜಾಕ್ಸ್ ಉತ್ತಮ ಪ್ರದರ್ಶನದಿಂದ ಸ್ಥಾನ ಉಳಿಸಿಕೊಂಡರು. ಇದರಿಂದ ಮ್ಯಾಕ್ಸ್‌ವೆಲ್ ಸಂಪೂರ್ಣವಾಗಿ ಡಗೌಟ್‌ಗೆ ಸೀಮಿತರಾಗಿದ್ದರು. ಆದರೆ, ವಿಲ್ ಜ್ಯಾಕ್ಸ್ ಇಂಗ್ಲೆಂಡ್ ಪರ ಆಡಲು ತವರಿಗೆ ತೆರಳಿದ್ದು, ಅವರ ಸ್ಥಾನವನ್ನು ಇದೀಗ ಮ್ಯಾಕ್ಸ್‌ವೆಲ್ ತುಂಬಬೇಕಿದೆ.
ಇದೀಗ ಮ್ಯಾಕ್ಸ್‌ವೆಲ್ ಮರಳಿ ಆರ್‌ಸಿಬಿ ತಂಡ ಸೇರಿಕೊಳ್ಳುತ್ತಿರುವುದು ಸಿಎಸ್‌ಕೆ ಭಯಕ್ಕೆ ಕಾರಣವಾಗಿದೆ. ಈ ಸೀಸನ್ನಲ್ಲಿ ಫಾರ್ಮ್‌ನಲ್ಲೇ ಇಲ್ಲದ ಮ್ಯಾಕ್ಸ್‌ವೆಲ್ ಮರಳಿ ತಂಡಕ್ಕೆ ಸೇರಿದರೆ ಸಿಎಸ್‌ಕೆ ಯಾಕೆ ಹೆದರಿಕೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಮ್ಯಾಡ್ ಮ್ಯಾಕ್ಸಿಯನ್ನು ಯಾವುದೇ ಕಾರಣಕ್ಕು ಕಡಿಮೆ ಅಂದಾಜಿ ಮಾಡಬಾರದು. ಏಕೆಂದರೆ, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಮ್ಯಾಚ್ ವಿನ್ನರ್ ಈತ.
2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಮ್ಯಾಕ್ಸ್‌ವೆಲ್ ಆಡಿದ ಇನ್ನಿಂಗ್ಸ್ ಇಂದಿಗೂ ಅನೇಕ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಸ್ಪರ್ಶಿಸುತ್ತದೆ. ಅಫ್ಘಾನಿಸ್ತಾನದ ಮೇಲೆ ಮೃಗದಂತೆ ದಾಳಿ ನಡೆಸಿ ದ್ವಿಶತಕ ಬಾರಿಸಿ ಸೋಲಬೇಕಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದನ್ನು ಮರೆಯುವಂತಿಲ್ಲ. ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿದೆ ಅಂದರೆ ಅದಕ್ಕೆ ಮ್ಯಾಕ್ಸ್‌ವೆಲ್ ಕೂಡ ಪ್ರಮುಖ ಕಾರಣ. ಆಫ್ಘಾನ್ ನೀಡಿದ 292 ರನ್ಗಳ ಗುರಿ ಬೆನ್ನತ್ತಿದ ಆಸಿಸ್ ಪಡೆ 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಬಹುತೇಕ ಸೋಲಿನ ದವಡೆಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕಾಲು ನೋವಿದ್ದರೂ ಏಕಾಂಗಿಯಾಗಿ ಹೋರಾಡಿದ ಮ್ಯಾಕ್ಸಿ, ತಮ್ಮ ಬ್ಯಾಟ್ ಮೂಲಕ ಬಿರುಗಾಳಿಯನ್ನೇ ಸೃಷ್ಟಿಸಿದರು. ಕೇವಲ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ ನೆರವಿನಿಂದ 200 ರನ್ಗಳ ದ್ವಿಶತಕದೊಂದಿಗೆ ಆಸಿಸ್ ಗೆಲುವಿಗೆ ಕಾರಣರಾದರು. ಒಂದು ವೇಳೆ ಆ ಪಂದ್ಯದಲ್ಲಿ ಆಸೀಸ್ ಸೋತಿದ್ದರೆ ವಿಶ್ವಕಪ್ ಭಾರತದ ಪಾಲಾಗುತ್ತಿತ್ತು ಎಂಬ ಭಾವನೆಯೂ ಹಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಇಂದಿಗೂ ಇದೆ.
ವಿಶ್ವಕಪ್ ಬಳಿಕ ಮ್ಯಾಕ್ಸಿ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲೂ ತಮ್ಮ ಸಾಮರ್ಥ್ಯ ತೋರಿದರು. ಸೀಮಿತ ಶೈಲಿಯಿಲ್ಲದೆ ಒಂದು ಚೆಂಡನ್ನು ಹತ್ತು ಬಗೆಯಲ್ಲಿ ಆಡುವ ಪ್ರತಿಭೆ ಮ್ಯಾಕ್ಸಿ ಅವರಲ್ಲಿದೆ. ಆದ್ದರಿಂದಲೇ ಅವರನ್ನು ಔಟ್ ಮಾಡುವುದು ಎದುರಾಳಿ ಬೌಲರ್‌ಗಳಿಗೆ ಅಷ್ಟು ಸುಲಭವಲ್ಲ. ಅನೇಕ ಬಾರಿ ಮ್ಯಾಕ್ಸಿ ತನ್ನ ತಪ್ಪುಗಳಿಂದ ಔಟಾಗಿದ್ದಾರೆ. ಹಸಿದ ಸಿಂಹ ಬೇಟೆಯಾಡಿದಂತೆ ಎದುರಾಳಿ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸುವ ಮ್ಯಾಕ್ಸಿ ರನ್ಗಳ ಮಳೆಯನ್ನೇ ಹರಿಸುತ್ತಾರೆ. ಇನ್ನು ನಾಕೌಟ್ ಮಾದರಿಯ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಆಟ ಸಂಪೂರ್ಣ ಭಿನ್ನವಾಗಿರುತ್ತದೆ. ಹೀಗಾಗಿ ಮ್ಯಾಕ್ಸ್‌ವೆಲ್ ಅಂದರೆ ಸಿಎಸ್‌ಕೆ ಹೆದರುತ್ತಿದೆ. (ಏಜೆನ್ಸೀಸ್)