ವಿರಾಟ್​ ಕೊಹ್ಲಿ ಹೇಳಿಕೆಗೆ ಸುನಿಲ್ ಗವಾಸ್ಕರ್​ ತಿರುಗೇಟು! ದಂಗಾದ ಕ್ರಿಕೆಟ್ ಫ್ಯಾನ್ಸ್​

WhatsApp Image 2024-05-05 at 6.26.27 PM
Published on

ಬೆಂಗಳೂರು: ನಿನ್ನೆ (ಮೇ.04) ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜೆರ್ಸ್​ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಫಾಫ್​ ಪಡೆ 4 ವಿಕೆಟ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಹೆಚ್ಚಿನ ಅಂತರದಲ್ಲಿ ಶುಭಮನ್​ ಗಿಲ್ ಪಡೆಯನ್ನು ಮಣಿಸಿದ ಆರ್​ಸಿಬಿಗೆ ಇದೊಂದೇ ಒಂದು ಪಂದ್ಯದಿಂದ ಅಧಿಕ ಅಂಕಗಳು ಲಭಿಸಿತು. ಇದರ ಸಹಾಯದಿಂದ ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ ಆರ್​ಸಿಬಿ 7ನೇ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಯಿತು.

ಒಂದೆಡೆ ಆರ್​ಸಿಬಿ ಫ್ಯಾನ್ಸ್​ಗಳ​ ಸಂಭ್ರಮಕ್ಕೆ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಕಾರಣರಾದರೆ, ಮತ್ತೊಂದೆಡೆ ಮಾಜಿ ಕ್ರಿಕೆಟಿಗರು ಹಾಗೂ ಕಾಮೆಂಟ್ರಿ ಮಾಡುವವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ, ಕಳೆದ ಪಂದ್ಯದಲ್ಲಿ ಕೊಹ್ಲಿ ನೀಡಿದ ಹೇಳಿಕೆ, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್​, ವಿರಾಟ್​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ತನ್ನ ಸ್ಟ್ರೈಕ್​ ರೇಟ್​ ಕುರಿತು ಕೇಳಲಾದ ಪ್ರಶ್ನೆಗೆ ಮುಖಕ್ಕೆ ಹೊಡೆದ ರೀತಿಯಲ್ಲಿ ಉತ್ತರಿಸಿದ್ದ ಕಿಂಗ್ ಕೊಹ್ಲಿ, "ನನ್ನ ಸ್ಟ್ರೈಕ್​ ರೇಟ್​ ಕುರಿತು ಕೆಲವರು ಅಲ್ಲಿ ಕುಳಿತು ಮಾತನಾಡಲು ಅರ್ಹರಿಲ್ಲ. ಅದರಲ್ಲೂ ಅವರು ನಮ್ಮ ಸ್ಥಾನದಲ್ಲಿ ಇದ್ದಿದ್ದರೇ, ಹೀಗೆ ಮಾತನಾಡುತ್ತಿರಲಿಲ್ಲ. ಆಗ ಬಹುಶಃ ಅವರಿಗೂ ತಿಳಿದಿರುತ್ತಿತ್ತು" ಎಂದು ಹೇಳಿದ್ದರು. ಇನ್ನೂ 'ರನ್​ ಮಷಿನ್​'ನ ಈ ಹೇಳಿಕೆಗೆ ನಿನ್ನೆಯ ಪಂದ್ಯ ಆರಂಭಕ್ಕೂ ಮುನ್ನ ಪ್ರತಿಕ್ರಿಯಿಸಿದ ಗವಾಸ್ಕರ್, ಕೊಟ್ಟ ತಿರುಗೇಟು ಹೀಗಿದೆ.

"ನಾವೆಲ್ಲರೂ ತುಂಬ ಅಲ್ಲದೇ ಹೋದರು ಅಲ್ಪ-ಸ್ವಲ್ಪವಾದರು ಕ್ರಿಕೆಟ್ ಆಡಿದ್ದೇವೆ. ನಾವು ಕಾಮೆಂಟ್ರಿ ಮಾಡುವವರು ಯಾವುದೇ ಅಜೆಂಡಾಗಳನ್ನು ಇಟ್ಟುಕೊಂಡಿರುವುದಿಲ್ಲ, ನಮಗೆ ಮುಂದೆ ಏನು ಕಾಣಿಸುತ್ತದೋ ಅದನ್ನು ಮಾತ್ರ ಹೇಳ್ತೇವೆ. ನಮಗೆ ಅವರು ಇಷ್ಟ, ಇವರು ಇಷ್ಟವಿಲ್ಲ ಎಂಬ ಯಾವುದೇ ಉದ್ದೇಶಗಳು ಇರುವುದಿಲ್ಲ. ಅಷ್ಟಕ್ಕೂ ಅದೆಲ್ಲಾ ಇದ್ದರೂ ಸಹ ಅಲ್ಲಿ ಏನು ನಡೆಯುತ್ತಿದೆ ಅದನ್ನು ಹೇಳುವುದು ಮಾತ್ರ ನಮಗೆ ಗೊತ್ತಿದೆ" ಎಂದು ವಿರಾಟ್​ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net