ಚಾಂಪಿಯನ್ಸ್​ ಟ್ರೋಫಿ ಬಳಿಕ ಈ ಮೂವರು ಕ್ರಿಕೆಟಿಗರಿಂದ ನಿವೃತ್ತಿ: ಆಕಾಶ್​ ಚೋಪ್ರಾ ಅಚ್ಚರಿ ಹೇಳಿಕೆ! Champions Trophy

Champions Trophy
Published on

Champions Trophy : ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆ. 19 ರಿಂದ ಅಂದರೆ, ಇನ್ನು ಮೂರೇ ದಿನದಲ್ಲಿ ಶುರುವಾಗುವ ಈ ಮೆಗಾ ಟೂರ್ನಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದ​ ಮಿಂಚಬೇಕೆಂದು ಅಭಿಮಾನಿಗಳು ಬಯಸಿದ್ದಾರೆ.

ಆದರೆ, ಈ ಚಾಂಪಿಯನ್ಸ್ ಟ್ರೋಫಿ ರೋಹಿತ್​ ಮತ್ತು ಕೊಹ್ಲಿ ಪಾಲಿಗೆ ಕೊನೆಯ ಅವಕಾಶವೇ? ಈ ಪ್ರಶ್ನೆಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಹೌದು ಎಂದು ಉತ್ತರ ನೀಡುತ್ತಾರೆ. ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ನಿವೃತ್ತರಾಗುತ್ತಾರೆ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಇತ್ತೀಚೆಗೆ ಆಕಾಶ್​ ಚೋಪ್ರಾ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಚಾರವಾಗಿ ಮಾತನಾಡಿದರು. ಭಾರವಾದ ಹೃದಯದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಚಾಂಪಿಯನ್ಸ್ ಟ್ರೋಫಿ ರೋಹಿತ್, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಕೊನೆಯ ಐಸಿಸಿ ಟೂರ್ನಿಯಾಗಲಿದೆ. ಈ ಟೂರ್ನಮೆಂಟ್ ನಂತರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ. ಆದರೆ ನಮ್ಮ ತಂಡ ಫೈನಲ್‌ನಲ್ಲಿ ಆಡಲು ಅರ್ಹತೆ ಪಡೆಯಲಿಲ್ಲ. ಇನ್ನು ಟಿ20ಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿರುವುದರಿಂದ ರೋಹಿತ್, ವಿರಾಟ್ ಕೊಹ್ಲಿ ಮತ್ತು ಜಡೇಜಾ 2026ರ ಟಿ20 ವಿಶ್ವಕಪ್‌ನಲ್ಲಿ ಆಡುವ ಯಾವುದೇ ಅವಕಾಶವಿಲ್ಲ ಎಂದು ಚೋಪ್ರಾ ಹೇಳಿದರು.

2027ರ ಏಕದಿನ ವಿಶ್ವಕಪ್‌ಗೆ ಸಾಕಷ್ಟು ಸಮಯ ಉಳಿದಿದೆ. ಆ ಹೊತ್ತಿಗೆ ಹಲವು ಬದಲಾವಣೆಗಳು ಸಂಭವಿಸಬಹುದು. ಆ ಸಮಯದವರೆಗೆ ರೋಹಿತ್, ಕೊಹ್ಲಿ ಮತ್ತು ಜಡೇಜಾ ತಂಡದಲ್ಲಿ ಉಳಿಯುವುದು ಕಷ್ಟ. ಇದು ಅವರ ಕೊನೆಯ ಐಸಿಸಿ ಟೂರ್ನಮೆಂಟ್ ಎಂದು ಹೇಳಿದರೆ ಅತಿಶಯೋಕ್ತಿ ಏನಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದರು.

ಆದರೆ, ಈ ಮೂವರು ಆಟಗಾರರು ತಮ್ಮ ಫಿಟ್​ನೆಸ್​ ಕಾಪಾಡಿಕೊಂಡು ಫಾರ್ಮ್ ಮುಂದುವರಿಸಿದರೆ, ಬಯಸಿದಷ್ಟು ಕಾಲ ಆಡಬಹುದು. ಫಾರ್ಮ್​ಗೆ ಬಂದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚೋಪ್ರಾ ಹೇಳಿದರು. ಅಂದಹಾಗೆ ಚಾಂಪಿಯನ್ಸ್ ಟ್ರೋಫಿ ಈ ತಿಂಗಳ 19ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net