ಇವನೇನು ಮನುಷ್ಯನಾ ಇಲ್ಲ ಪಕ್ಷಿನಾ? ಗ್ಲೆನ್​ ಫಿಲಿಪ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಬೆರಗಾದ ಕ್ರೀಡಾ ಜಗತ್ತು! Unbelievable Catch

Unbelievable Catch
Published on

Unbelievable Catch : ಕ್ರಿಕೆಟ್ ಒಂದು ಅತ್ಯದ್ಭುತ ಕ್ರೀಡೆಯಾಗಿದ್ದು, ಸದಾ ಒಂದಿಲ್ಲೊಂದು ವಿಚಾರಗಳಿಗೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್​ ಪಂದ್ಯದಲ್ಲಿ ನಡೆದಿದೆ. ಇದು ಕ್ಯಾಚ್​ಗೆ ಸಂಬಂಧಿಸಿದ ವಿಚಾರವಾಗಿದ್ದು, ಕ್ರಿಕೆಟ್​ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಕ್ಯಾಚ್ ಎಂದರೆ ತಪ್ಪಾಗಲಾರದು.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ನ್ಯೂಜಿಲೆಂಡ್​ನ ಕ್ರೈಸ್ಟ್ ಚರ್ಚ್​ನಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ಇನಿಂಗ್ಸ್‌ನ 53ನೇ ಓವರ್‌ನಲ್ಲಿ ಗ್ಲೆನ್​ ಫಿಲಿಪ್ಸ್​ ಅದ್ಭುತ ಕ್ಯಾಚ್​ ಹಿಡಿದರು. ಟಿಮ್ ಸೌಥಿ ಎಸೆದ ಚೆಂಡನ್ನು ಇಂಗ್ಲೆಂಡ್​ ಆಟಗಾರ ಒಲಿಪಾಪ್, ಕಟ್ ಶಾಟ್ ಆಡಿದರು. ಆದರೆ, ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗ್ಲೆನ್ ಫಿಲಿಪ್ಸ್ ಪಕ್ಷಿಯಂತೆ ಹಾರಿ ಒಂದು ಕೈಯಿಂದ ಕ್ಯಾಚ್ ಪಡೆದರು.

ಇದನ್ನು ನೋಡಿದ ಬ್ಯಾಟರ್ ಒಲಿಪಾಪ್ ಕೂಡ ಶಾಕ್​ ಆದರು. ಅಲ್ಲದೆ, ಫೀಲ್ಡರ್​ಗಳು ಅಚ್ಚರಿಗೊಂಡರು. ಮೈದಾನದಲ್ಲಿದ್ದ ಪ್ರೇಕ್ಷಕರು ಸಹ ಮಂತ್ರಮುಗ್ಧರಾದರು. ಗ್ಲೆನ್ ಫಿಲಿಪ್ಸ್​ ಅವರ ಅದ್ಭುತ ಕ್ಯಾಚ್​​ನಿಂದಾಗಿ 77 ರನ್​ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಒಲಿಪಾಪ್​ ಪೆವಿಲಿಯನ್ ತಲುಪಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದನ್ನು ನೋಡಿದವರು ಇವನೇನು ಮನುಷ್ಯನಾ ಅಥವಾ ಪಕ್ಷಿನಾ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ 348 ರನ್ ಗಳಿಸಿದೆ. ಕಿವೀಸ್ ದಾಂಡಿಗರಲ್ಲಿ ಕೇನ್ ವಿಲಿಯಮ್ಸನ್ (93) ಸ್ವಲ್ಪದರಲ್ಲೇ ಶತಕ ವಂಚಿತರಾದರು. ಗ್ಲೆನ್ ಫಿಲಿಪ್ಸ್ (ಔಟಾಗದೆ 58) ಅರ್ಧಶತಕ ಗಳಿಸಿದರು. ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿದೆ. ಹ್ಯಾರಿ ಬ್ರೂಕ್ (ಅಜೇಯ 132) ಮತ್ತು ನಾಯಕ ಬೆನ್‌ಸ್ಟೋಕ್ಸ್ (ಅಜೇಯ 37) ಕ್ರೀಸ್‌ನಲ್ಲಿದ್ದಾರೆ. ಕಿವೀಸ್‌ನ ಮೊದಲ ಇನ್ನಿಂಗ್ಸ್ ಸ್ಕೋರ್‌ಗಿಂತ ಇಂಗ್ಲೆಂಡ್ ಇನ್ನೂ 29 ರನ್ ಹಿಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net