ಈ ಯೋಜನೆಯಡಿ ಕೇವಲ 50 ರೂ. ಕಟ್ಟಿದರೆ 35 ಲಕ್ಷ ರೂ. ನಿಮ್ಮ ಕೈಗೆ! ಇದು ಯಾವ ಸ್ಕೀಮ್​ ಗೊತ್ತಿದೆಯೇ?

ವಿಜಯವಾಣಿ - 2024-11-29T124917.962
Published on

ನವದೆಹಲಿ: ಪ್ರತಿಯೊಬ್ಬರು ತಾವು ದುಡಿದ ಹಣದಲ್ಲಿ ಖರ್ಚು-ವೆಚ್ಚಕ್ಕಿಂತ ಆದಷ್ಟು ಉಳಿತಾಯ ಮಾಡಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಕಾಸು ಕುಡಿಕೆ ಮಂತ್ರ, ಬ್ಯಾಂಕ್ ಉಳಿತಾಯ ಖಾತೆ, ಫಿಕ್ಸಡ್​ ಡೆಪಾಸಿಟ್​ ಹೀಗೆ ಹಲವಾರು ಮಾದರಿಯಲ್ಲಿ ಸಂಪಾದಿಸಿದ ಹಣವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಆದರೆ, ಬಹುತೇಕರಿಗೆ ಹಣ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಹೆಚ್ಚಿನ ಆದಾಯ ಬಂದವರಿಗೆ ಉಳಿತಾಯ ಮಾಡಲು ಬರೋದಿಲ್ಲ. ಸೇವಿಂಗ್ಸ್​ ಮಾಡಿಕೊಳ್ಳಲು ಮುಂದಾಗುವರಿಗೆ ಅಧಿಕ ಮೊತ್ತದ ಸಂಬಳವೇ ಇರುವುದಿಲ್ಲ. ಒಂದು ರೀತಿ ಹೇಳುವುದಾದರೆ, ಹಲ್ಲಿದ್ದವನಿಗೆ ಕಡಲೇ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಎಂಬಂತೆ. ಆದರೆ, ಇಂದು ನಾವು ಹೇಳ್ತಿರುವ ಯೋಜನೆ ಭಾರತೀಯ ಅಂಚೆ ಇಲಾಖೆಯದ್ದು. ಈ ಸ್ಕೀಮ್​ನಡಿ ನೀವು ಸುಲಭವಾಗಿ ಹಣವನ್ನು ಉಳಿತಾಯ ಮಾಡುವುದಲ್ಲದೇ, ಭವಿಷ್ಯದಲ್ಲಿ ಸುಖವಾಗಿರಲು ಇದು ಸಹಾಯ ಮಾಡುತ್ತದೆ.

ಬಡವರ ಬಾದಾಮಿ ಭಾರತೀಯ ಅಂಚೆ ಇಲಾಖೆ. ಹಳ್ಳಿಗಾಡು ಪ್ರದೇಶಗಳಲ್ಲಿ ವಾಸಿಸುವ ರೈತರು, ಕೂಲಿ ಕಾರ್ಮಿಕರು ಹೀಗೆ ಬಡ ವರ್ಗದ ಜನರಿಗೆ ಇದೇ ಹಣ ಉಳಿತಾಯದ ಸೂರು. ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆಯುವ ಅಂಚೆ ಇಲಾಖೆ, ಬಡವರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಹೊಂದಿವೆ. ದೇಶದ ಜನರ ಹಣ ಉಳಿಸುವಿಕೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಕೇಂದ್ರ, ಜನರಲ್ಲಿ ಉತ್ತಮ ಉಳಿತಾಯ, ಹೆಚ್ಚಿನ ರಿಟರ್ನ್ಸ್​, ಕುಟುಂಬದ ಭವಿಷ್ಯಕ್ಕೆ ಆರ್ಥಿಕ ಭದ್ರತಾ ಒದಗಿಸುವಂತ ಯೋಜನೆಗಳ ಮೂಲಕ ಆಗಾಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುತ್ತದೆ.

ಅಂಚೆ ಇಲಾಖೆಯ ಹಲವಾರು ಹಣ ಉಳಿತಾಯ ಯೋಜನೆಗಳು ಜನರಿಗೆ ಚಿರಪರಿಚಿತ. ಇದರ ಪ್ರಯೋಜನ, ಸವಲತ್ತುಗಳನ್ನು ಇಂದು ಅನೇಕರು ಪಡೆಯುತ್ತಿದ್ದಾರೆ. ಅಂಚೆ ಕಛೇರಿಯು ಪರಿಚಯಿಸಿರುವ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆಯು ಅತ್ಯಂತ ಜನಪ್ರಿಯ. ಈ ಸ್ಕೀಮ್​ನಡಿ ನೀವು ಹಣ ಕಟ್ಟುವ ಮೂಲಕ ಉಳಿತಾಯವನ್ನು ಮಾಡಲು ಪ್ರಾರಂಭಿಸಬಹುದು. ಪ್ರಾರಂಭದಲ್ಲಿ ಕೇವಲ 50 ರೂ. ಕಟ್ಟಿದರೆ, ಭವಿಷ್ಯದಲ್ಲಿ ಅದನ್ನು ಮುರಿಯುವ ಸಮಯ ಬಂದಾಗ ನೀವು 35 ಲಕ್ಷ ರೂ. ಹಣವನ್ನು ಪಡೆಯುಬಹುದಾಗಿದೆ. ಅಷ್ಟಕ್ಕೂ ಇದನ್ನು ಪಡೆಯುವುದು ಹೇಗೆ? ಎಷ್ಟು ರೂಪಾಯಿ ಕಟ್ಟಿದರೆ ಸಾಕು ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.

ಯಾವ ವಯಸ್ಸಿನವರು ಕಟ್ಟಬಹುದು

ಕನಿಷ್ಠ ಮತ್ತು ಗರಿಷ್ಠ ದಾಖಲಾತಿ 19ರಿಂದ 55 ವಯಸ್ಸಿನವರು ಈ ಗ್ರಾಮ ಸುರಕ್ಷಾ ಯೋಜನೆ ಪಡೆಯಲು ಅರ್ಹರು. ಕನಿಷ್ಠ ಎಂದರೆ 10,000 ಮತ್ತು 10 ಲಕ್ಷ ರೂ. ಹಣದವರೆಗೆ ಹೂಡಿಕೆ ಮಾಡಬಹುದು. ಮೂರು ವರ್ಷಗಳ ನಂತರ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು ಐದು ವರ್ಷಗಳ ಮೊದಲೇ ಮುಕ್ತಾಯಗೊಳಿಸಿದರೆ, ಬೋನಸ್‌ ಸೇರಿದಂತೆ ಯಾವುದೇ ಲಾಭವನ್ನು ಪಡೆಯಲು ಆ ಹೂಡಿಕೆದಾರರು ಅನರ್ಹರಾಗುತ್ತಾರೆ. ಹೊಂದಿಕೊಳ್ಳುವ ಪಾವತಿ ಆಯ್ಕೆಗಳು ಲಭ್ಯವಿವೆ. ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಲು ಅವಕಾಶವಿದೆ.

ಯೋಜನೆಯ ಲಾಭದಲ್ಲಿ ವ್ಯತ್ಯಾಸ ಇರಲಿದೆ?

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರತಿದಿನ 50 ರೂಪಾಯಿಗಳನ್ನು ಹೂಡಿಕೆ ಮಾಡಬೇಕಿದೆ. ಇದು ತಿಂಗಳಿಗೆ 1,500 ರೂ. ಆಗಲಿದ್ದು, ಈ ಯೋಜನೆಯು 31 ಲಕ್ಷದಿಂದ 35 ಲಕ್ಷ ರೂ.ವರೆಗೆ ಆದಾಯವನ್ನು ನೀಡುತ್ತದೆ. ಈ ಹೂಡಿಕೆ ಆಯಾ ವಯಸ್ಸಿನವರಿಗೆ ಹಾಗೂ ವರ್ಷದಲ್ಲಿ ವ್ಯತ್ಯಾಸವಿರಲಿದೆ. ಈ ಬಗ್ಗೆ ಹೆಚ್ಚಿನ ನಿಖರ ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು ನಿಮ್ಮ ಹತ್ತಿರದ ಅಂಚೆ ಕಛೇರಿಗೆ ಭೇಟಿ ನೀಡಿ.

ಯಾವಾಗ ಹಣ ಸಿಗುತ್ತದೆ?

55ನೇ ವರ್ಷಕ್ಕೆ ಹೂಡಿಕೆದಾರರು 31,60,000 ರೂ. ಪಡೆದರೆ, 58ನೇ ವಯಸ್ಸಿಗೆ 33,40,000 ರೂ. ಪಡೆಯುತ್ತಾರೆ. ಇನ್ನು 60ನೇ ವರ್ಷಕ್ಕೆ 34.60 ಲಕ್ಷ ರೂ.ಗಳನ್ನು ಸ್ವೀಕರಿಸುತ್ತಾರೆ. ಇನ್ನು ಈ ಯೋಜನೆಯನ್ನು ಪಡೆದವರು ಬೋನಸ್​ ಜತೆಗೆ ಸಂಪೂರ್ಣ ಮೊತ್ತವನ್ನು ತಮ್ಮ 80ನೇ ವಯಸ್ಸಿಗೆ ಸ್ವೀಕರಿಸುತ್ತಾರೆ. ಇದು ಯೋಜನೆಯಲ್ಲಿ ಬಿಡಿಯಾಗಿರುವ ಇತರೆ ಸ್ಕೀಮ್​ಗಳ ಮೇಲೆ ನಿರ್ಧಾರವಾಗುತ್ತದೆ. ಅಂದರೆ ನೀವು ಆಯ್ಕೆ ಮಾಡಿಕೊಳ್ಳುವ ಸಬ್​ ಸ್ಕೀಮ್​ ಮೇಲೆ ನಿಂತಿರುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net