

ಬೆಂಗಳೂರು: ಇತ್ತೀಚೆಗಷ್ಟೇ ಮುಕ್ತಾಯಗೊಂಡ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ ಬೆಂಗಳೂರು ಮೂಲದ ಉದ್ಯಮಿ ತನಯ್ ಪ್ರತಾಪ್ ಅವರು ಟ್ವೀಟ್ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯ ಭಾರೀ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಐಪಿಎಲ್ನ ಒಂದೂ ಪಂದ್ಯವನ್ನು ಮಿಸ್ ಮಾಡಿಕೊಳ್ಳದ ಕಟ್ಟಾ ಅಭಿಮಾನಿಗಳಿಗೆ ತನಯ್ ಅವರು ತಮ್ಮ ಟ್ವೀಟ್ ಅನ್ನು ಸಮರ್ಪಿಸಿದ್ದಾರೆ. ಜನರು ನನ್ನ ಬಳಿ ಸಮಯ ಇಲ್ಲ ಎಂದು ಹೇಳುತ್ತಾರೆ. ಆದರೆ, ಐಪಿಎಲ್ ಪಂದ್ಯದ ವೇಳೆ ಟಿವಿ ಅಥವಾ ಮೊಬೈಲ್ ಮುಂದೆ ಅಂಟಿಕೊಂಡಿರುತ್ತಾರೆ. ಒಂದು ದಿನಕ್ಕೆ 4 ಗಂಟೆ ಐಪಿಎಲ್ ಪಂದ್ಯಕ್ಕಾಗಿ ವ್ಯಯಿಸಲಾಗುತ್ತಿದೆ. 30 ದಿನಕ್ಕೆ 120 ಗಂಟೆಯಾಗುತ್ತಿದೆ. ನಮ್ಮ ಜೀವನದ ಈ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಇದೇ ಸಮಯವನ್ನು ಹೊಸ ಕೌಶಲಗಳನ್ನು ಕಲಿಯುವ ಕಡೆ ವ್ಯಯಿಸಿದರೆ ಅದರಿಂದಾಗು ಪ್ರಯೋಜನಗಳನ್ನು ಕಲ್ಪಿಸಿಕೊಳ್ಳಿ. ಸಮಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಜಾಣತನವನ್ನು ಆಯ್ಕೆ ಮಾಡಿಕೊಳ್ಳಿ ಎಂದು ತನಯ್ ಪ್ರತಾಪ್ ಟ್ವೀಟ್ ಮಾಡಿದ್ದಾರೆ.
ಇದೀಗ ತನಯ್ ಅವರ ಟ್ವೀಟ್ ಭಾರೀ ಚರ್ಚೆಯಾಗುತ್ತಿದೆ. ಆದರೆ, ಅನೇಕರು ತನಯ್ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ. ಎಲ್ಲ ಸಮಯವನ್ನು ಕಲಿಯುವುದಕ್ಕೆ ಮೀಸಲಿಡಲು ಸಾಧ್ಯವಿಲ್ಲ ಎಂದಿದ್ದಾರೆ. ತಮ್ಮಷ್ಟಕ್ಕೆ ತಾವು ಎಂಜಾಯ್ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಸಮಯವನ್ನು ಮೀಸಲಿಡಬೇಕಾಗುತ್ತದೆ. ಸ್ವಲ್ಪವಾದರೂ ಎಂಜಾಯ್ ಮಾಡಲು ಜನರನ್ನು ಬಿಡಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಯಾರಾದರೂ ಹೊಸ ಕೌಶಲ್ಯವನ್ನು ಕಲಿಯಲು ದಿನವಿಡಿ ಸಮಯ ವ್ಯಯಿಸಿ, ರಾತ್ರಿಯಲ್ಲಿ ಪಂದ್ಯವನ್ನು ವೀಕ್ಷಿಸಿದರೆ ಏನು? ಸಂತೋಷವಿಲ್ಲದ ಜೀವನವು ಕೆಲಸ ಮಾಡಲು ಪ್ರೇರಣೆಯಿಲ್ಲದ ಕೌಶಲ್ಯದಂತೆಯೇ ಇರುತ್ತದೆ ಎಂದು ಇನ್ನೊಬ್ಬ ನೆಟ್ಟಿಗ ತನಯ್ ಅವರಿಗೆ ಉತ್ತರ ನೀಡಿದ್ದಾರೆ. ಐಪಿಎಲ್ ವರ್ಷಕ್ಕೆ ಒಮ್ಮೆ ಬರುತ್ತದೆ. ಸ್ವಲ್ಪ ಎಂಜಾಯ್ಗಾಗಿ ನೋಡಿದರೆ ತಪ್ಪೇನಿಲ್ಲ. ಆದರೆ, ಐಪಿಎಲ್ ಹೆಸರಿನಲ್ಲಿ ನಡೆಯುವ ಜೂಜಾಟಗಳಲ್ಲಿ ಭಾಗಿಯಾಗಬಾರದು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ತನಯ್ ಪ್ರತಾಪ್ ಅವರ ಟ್ವೀಟ್ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)