

ಲಾಹೋರ್: ಇದು ಮುಗಿಯದ ಕಥೆ! ಚಾಂಪಿಯನ್ಸ್ ಟ್ರೋಫಿ 2025ರ ಅತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ತಮ್ಮ ನೆಲಕ್ಕೆ ಭಾರತವನ್ನು ಕರೆಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದೆ. ಆದ್ರೆ, ಯಾವುದು ಅವರ ಪರವಿಲ್ಲ ಎಂಬುದು ಸ್ಪಷ್ಟವಾಗಿದೆ. ಆರಂಭಿಕ ಹಂತದಲ್ಲಿ ಬಿಸಿಸಿಐ ಮೊರೆ ಹೋಗಿದ್ದ ಪಾಕ್, ತದನಂತರ ಐಸಿಸಿಗೆ ಗಾಳ ಹಾಕಿತ್ತು. ಇದ್ಯಾವುದು ಕೂಡ ತಮಗೆ ಲಾಭ ತಂದುಕೊಡುತ್ತಿಲ್ಲ ಎಂದು ಚಿಂತಿಸಿದ ಮಾಜಿ ಆಟಗಾರರು, ಈಗ ತಮ್ಮ ಟೀಕಾಪ್ರಹಾರದಿಂದ ಟೀಮ್ ಇಂಡಿಯಾವನ್ನು ಕೆರಳಿಸಲು ಮುಂದಾಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಶ್ರೀಲಂಕಾ ಎದುರು ಏಕದಿನ ಸರಣಿ ಸೋತ ಟೀಮ್ ಇಂಡಿಯಾ ವಿರುದ್ಧ ಭಾರೀ ಟೀಕೆಗಳನ್ನು ಹೇರಿದ್ದರು. ಈಗ ಪ್ರತ್ಯೇಕವಾಗಿ ತಂಡದ ಆಟಗಾರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಇವರ ಹೇಳಿಕೆಯೇ ಬಲವಾದ ಸಾಕ್ಷಿ.
ಇದನ್ನೂ ಓದಿ: ಕಬ್ಬಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ
ಮೊದ ಮೊದಲು ಭಾರತ ಮತ್ತು ಬಿಸಿಸಿಐ ಅನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನದ ಮಾಜಿ ಆಟಗಾರರು, ನೇರ ವಾಗ್ದಾಳಿ ನಡೆಸಿದರು. ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಬಗ್ಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಐಸಿಸಿಗೆ ನೇರ ಗಾಳ ಹಾಕಿತು. ಕಡೆಗೆ ಇದು ಸಾಧ್ಯವಾಗದ ಕಾರಣ ಇದೀಗ ಪ್ರತ್ಯೇಕವಾಗಿ ಟೀಮ್ ಇಂಡಿಯಾ ಆಟಗಾರರನ್ನು ಟೀಕಿಸಿ, ವ್ಯಂಗ್ಯವಾಡುವ ಚಾಳಿಯನ್ನು ಮುಂದುವರೆಸಿದ್ದಾರೆ. ಇಷ್ಟು ದಿನಗಳಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಡೇಜಾ ಸೇರಿದಂತೆ ಇತರರನ್ನು ಲೇವಡಿ ಮಾಡ್ತಿದ್ದ ಪಾಕ್ ಆಟಗಾರರು, ಈಗ ಎಡಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆದ ಇಶಾನ್ ಕಿಶನ್ರನ್ನು ಟಾರ್ಗೆಟ್ ಮಾಡಿದ್ದಾರೆ.
"ಸದ್ಯಕ್ಕೆ ಇಶಾನ್ ಕಿಶನ್ಗೆ ಟೀಮ್ ಇಂಡಿಯಾದಲ್ಲಿ ಅವಕಾಶವಿಲ್ಲ. ಹೀಗಾಗಿ ಆತ ಮುಂಬರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಆಡುವುದು ಸೂಕ್ತ. ಪ್ರೀಮಿಯರ್ ಲೀಗ್ನತ್ತ ಹೆಚ್ಚು ಗಮನಹರಿಸುವುದು ಒಳಿತು. ನನ್ನ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿ ಮುಗಿಯುವವರೆಗೂ ಮೆನ್ ಇನ್ ಬ್ಲ್ಯೂ ತಂಡದಲ್ಲಿ ಕಿಶನ್ಗೆ ಚಾನ್ಸ್ ಸಿಗೋಲ್ಲ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ತಮ್ಮನ್ನು ಟೀಮ್ಗೆ ಸೇರಿಸಿಕೊಳ್ಳಬೇಕು ಎಂದರೆ ಈಗಿರುವುದು ಇದೊಂದೇ ದಾರಿ ನಿಮಗೆ" ಎಂದು ಪಾಕ್ನ ಮಾಜಿ ಆಟಗಾರ ಬಸಿತ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ: ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ಅಗತ್ಯ
ಪ್ರಸ್ತುತ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿರುವ ಕಿಶನ್, ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ, ತಂಡದ ಗೆಲುವಿಗೆ ಕಾರಣರಾದರು. ಒಂದೊಳ್ಳೆ ಇನ್ನಿಂಗ್ಸ್ ಮೂಲಕ ತಂಡಕ್ಕೆ ಕೊಡುಗೆ ಕೊಟ್ಟಿದ್ದರೂ ಸಹ ಇಶಾನ್ ಕಿಶನ್ ಕುರಿತು ಬಸಿತ್ ಅಲಿ ನೀಡಿದ ಹೇಳಿಕೆ ಸದ್ಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ,(ಏಜೆನ್ಸೀಸ್).