

ಹಿರೀಸಾವೆ : ಶೈಕ್ಷಣಿಕ ಹಂತದಲ್ಲಿಯೇ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುವುದು ಅತ್ಯಾಗತ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಸಕರ ಸರ್ಕಾರಿ ಮಾಧ್ಯಮಿಕ ಬಾಲಕಿಯರ ಶಾಲೆಯ ಸಹಯೋಗದಲ್ಲಿ ಪಟ್ಟಣದ ಗಂಗಾಧರ್ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 2024-2025 ನೇ ಸಾಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರಿಕೆಟ್, ಕಬಡ್ಡಿ ಹಾಗೂ ಹಾಕಿ ಸೇರಿದಂತೆ ಒಲಂಪಿಕ್ಸ್ ಕ್ರೀಡೆಗಳು ಪ್ರಸ್ತುತ ದಿನಗಳಲ್ಲಿ ಮಹತ್ವದ ಬೆಳವಣಿಗೆ ಕಂಡಿವೆ. ಕ್ರೀಡಾ ಕ್ಷೇತ್ರವು ಈಗ ವಿಶ್ವದಲ್ಲಿಯೇ ಮುಂಚೂಣೆಯಲ್ಲಿದ್ದು, ಲಕ್ಷಾಂತರ ಕ್ರೀಡಾಪಟುಗಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿದೆ ಎಂದರು.
ಹೋಬಳಿ ವ್ಯಾಪ್ತಿಯ ಖಾಸಗಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನೇತರ ಸೇರಿದಂತೆ 26 ಶಾಲೆಗಳಿಂದ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಹಿಸಿದ್ದರು. 65 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು. ಅಲ್ಲದೆ ಪಾಲಕರು ಸಹ ಪಾಲ್ಗೊಂಡು ಎಲ್ಲ ಮಕ್ಕಳಿಗೂ ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು.
ಶಾಸಕ ಸಿ.ಎನ್.ಬಾಲಕೃಷ್ಣ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಧ್ವಜಾರೋಹಣ ನೆರವೇರಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ಕ್ರೀಡಾ ಜ್ಯೋತಿ ಬೆಳಗಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ಕ್ಷೇತ್ರ ಸಮಸ್ವಯಾಧಿಕಾರಿ ಕೆ.ಎನ್.ಅನಿಲ್, ಹಿರೀಸಾವೆ ಕ್ಲಸ್ಟರ್ ಸಿಆರ್‌ಪಿ ಕೆ.ವಿ.ಮಂಜುನಾಥ್, ಮುಖಂಡರಾದ ಎಚ್.ಜಿ.ರಾಮಕೃಷ್ಣ, ಎ.ಜಿ.ಪ್ರಭಾಕರ್, ಗ್ರಾಪಂ ಸದಸ್ಯರು, ಎಲ್ಲ ಶಾಲೆಗಳ ಶಿಕ್ಷಕರು ಹಾಗೂ ಪಾಲಕರು ಇದ್ದರು.