ಕಬ್ಬಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ

ಕಬ್ಬಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ
Published on

ಹಾಸನ: ನಗರದ ಕಾರೆಕೆರೆಯಲ್ಲಿರುವ ಕೃಷಿ ಮಹಾವಿದ್ಯಾಲಯ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಹಾಸನ ತಾಲೂಕಿನ ದುದ್ದ ಹೋಬಳಿಯ ಕಬ್ಬಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ಕಾಲೇಜಿನ 18 ವಿದ್ಯಾರ್ಥಿಗಳು ಮುಂದಿನ ಮೂರು ತಿಂಗಳುಗಳ ಕಾಲ ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದು, ಗ್ರಾಮದ ಪ್ರಮುಖ ಬೆಳೆಗಳಾದ ತೆಂಗು, ಮೆಕ್ಕೆಜೋಳ, ಶುಂಠಿ, ಆಲೂಗೆಡ್ಡೆ, ರಾಗಿ ಮತ್ತು ಇತರ ಬೆಳೆಗಳಲ್ಲಿ ಕಂಡುಬರುವ ಪೋಷಕಾಂಶಗಳ ಕೊರತೆ, ರೋಗ ಮತ್ತು ಕೀಟ ಬಾಧೆಗಳ ನಿರ್ವಹಣೆ ಮತ್ತು ಇತರೆ ಕೃಷಿ ತಂತ್ರಜ್ಞಾನಗಳ ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲಿದ್ದಾರೆ. ಹಾಗೆಯೇ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ವಿವಿಧ ಬೆಳೆಗಳ ಹೊಸ ತಳಿಗಳನ್ನು ಗ್ರಾಮದ ಬೆಳೆ ಸಂಗ್ರಹಾಲಯದಲ್ಲಿ ಬೆಳೆಯಲಿದ್ದು ಅವುಗಳ ವೈಜ್ಞಾನಿಕ ಬೇಸಾಯ ಪದ್ಧತಿಗಳ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡಲಿದ್ದಾರೆ.
ಗ್ರಾಮದ ಸಮುದಾಯ ಭವನದಲ್ಲಿ ಕೃಷಿ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದು, ರೈತರು ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂರು ತಿಂಗಳ ಶಿಬಿರದಲ್ಲಿ ಮುಖ್ಯವಾಗಿ ಬೀಜೋಪಚಾರ, ಮಣ್ಣು ಪರೀಕ್ಷೆ, ಪಶು ಆರೋಗ್ಯ ತಪಾಸಣೆ, ಮಾನವ ಆರೋಗ್ಯ ತಪಾಸಣೆ ಶಿಬಿರ, ಸಾವಯವ ಕೃಷಿ ಪದ್ಧತಿ, ಸಮಗ್ರ ಕೃಷಿ ಪದ್ಧತಿ ಮತ್ತು ಮುಂತಾದ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಕಾಲೇಜಿನ ಕೃಷಿ ವಿಜ್ಞಾನಿಗಳು ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡಲಿದ್ದು, ರೈತರ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ತಿಳಿಸಲಿದ್ದಾರೆ. ಈ ಶಿಬಿರವನ್ನು ಯಶಸ್ವಿಗೊಳಿಸಲು ಗ್ರಾಮದ ರೈತರ ಸಹಕಾರ ಮತ್ತು ಪ್ರೋತ್ಸಾಹವನ್ನು ಕಬ್ಬಳಿ ಶಿಬಿರಾರ್ಥಿಗಳು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net