ಸಹೋದರನ ಆರೈಕೆಗೆ ನೇಮಿಸಿದ ಮಹಿಳೆಯಿಂದ ಯುವಿ ತಾಯಿಗೆ ಬೆದರಿಕೆ: ವಂಚಕಿ ಸಿಕ್ಕಿಬಿದ್ದಿದ್ದೇ ರೋಚಕ!

Yuvaraja Singh
Published on

ನವದೆಹಲಿ: ಟೀಮ್​ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರ ತಾಯಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಮಹಿಳೆಯೊಬ್ಬಳನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಯುವಿ ಅವರು ತಾಯಿ ಶಬ್ನಮ್​ ಸಿಂಗ್​ ನೀಡಿದ ದೂರಿನ ಆಧಾರದ ಮೇಲೆ ಹೇಮಾ ಕೌಶಿಕ್​ ಎಂಬಾಕೆಯನ್ನು ಬಂಧಿಸಲಾಗಿದೆ. ಯುವಿ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿ, ಬೆದರಿಸಿ ಹಣ ಸುಲಿಗೆ ಮಾಡಲು ಆರೋಪಿ ಹೇಮಾ ಪ್ರಯತ್ನಿಸಿದ್ದಾಳೆ.

ಕೆಲಸದಿಂದ ತೆಗೆದ ದ್ವೇಷ

ಅನಾರೋಗ್ಯದಿಂದ ಬಳಲುತ್ತಿರುವ ಯುವಿ ಸಹೋದರ ಸೊರ್ವಾರ್​ ಸಿಂಗ್​ರನ್ನು ನೋಡಿಕೊಳ್ಳಲು ಮಹಿಳೆಯನ್ನು ನೇಮಿಸಲಾಗಿತ್ತು. ಆದರೆ, ಆಕೆಯ ಕೆಲಸದಿಂದ ಅಸಮಾಧಾನಗೊಂಡ ಯುವಿ ಕುಟುಂಬ ಆಕೆಯನ್ನು 20 ದಿನಗಳ ನಂತರ ಕೆಲಸದಿಂದ ತೆಗೆದು ಹಾಕಿದ್ದರು. ಇದೇ ದ್ವೇಷದಲ್ಲಿ ಆರೋಪಿ ಹೇಮಾ ಯುವಿ ತಾಯಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಇದಾದ ಬಳಿಕ ಶಬ್ನಮ್​ ಸಿಂಗ್​ ದೂರು ನೀಡಿದ್ದರು.

ಪೊಲೀಸರ ಪ್ಲ್ಯಾನ್​

40 ಲಕ್ಷ ರೂಪಾಯಿ ನೀಡದಿದ್ದರೆ ಸೋರ್ವರ್ ಸಿಂಗ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಕುಟುಂಬದ ಗೌರವವನ್ನು ಹಾಳು ಮಾಡುವುದಾಗಿ ಹೇಮಾ ಬೆದರಿಕೆ ಹಾಕಿದ್ದಳು. ದೂರು ನೀಡಿದ ಬಳಿಕ ಹೇಮಾಳನ್ನು ಬಲೆಗೆ ಕೆಡವಲು ಪೊಲೀಸ್ ಪ್ಲ್ಯಾನ್​ ಮಾಡಿ, ಹೇಮಾ ಕೇಳಿದ ಹಣದಲ್ಲಿ ಮೊದಲ ಹಂತವಾಗಿ 5 ಲಕ್ಷ ರೂಪಾಯಿ ಕೊಡುವುದಾಗಿ ಯುವಿ ಕುಟುಂಬದಿಂದ ಆಕೆಗೆ ಮಸೇಜ್​ ಕಳುಹಿಸಲಾಯಿತು. ಹಣ ಸಿಗುತ್ತದೆ ಎಂಬ ಖುಷಿಯಲ್ಲಿ ಅದನ್ನು ವಸೂಲಿ ಮಾಡಲು ಹೇಮಾ ಆಗಮಿಸಿದಾಗ ಆಕೆಯನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net