More

    ಬಿಪಿಎಲ್ ಹೆಲ್ತ್ ಕಾರ್ಡ್| ಹೊಸ ಅರ್ಜಿದಾರರಿಗೆ ಸಿಹಿ ಸುದ್ದಿ; ಚಿಕಿತ್ಸಾ ಸೌಲಭ್ಯಕ್ಕೆ ಬಳಕೆ

    ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಬಯಸಿ ಅರ್ಜಿ ಸಲ್ಲಿಸಿ, ಚಾತಕ ಪಕ್ಷಿಯಂತೆ ಕಾಯುತ್ತಿರುವ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇವಲ ಆರೋಗ್ಯ ಸೇವೆ ಸೌಲಭ್ಯದ ಸಲುವಾಗಿ ಬಿಪಿಎಲ್ ಕಾರ್ಡ್ ಬಯಸಿರುವ ಅರ್ಹ ಅರ್ಜಿದಾರರಿಗೆ ಬಿಪಿಎಲ್ ‘ಹೆಲ್ತ್’ ಕಾರ್ಡ್ ಶೀಘ್ರವೇ ವಿತರಣೆಯಾಗಲಿದೆ. ಈ ಕಾರ್ಡ್ ಆರೋಗ್ಯ ಸೌಲಭ್ಯಕ್ಕೆ ಮಾತ್ರ ಸೀಮಿತವಾಗಿರಲಿದ್ದು, ಪಡಿತರ ಪಡೆಯಲು ಅವಕಾಶ ಇರುವುದಿಲ್ಲ.

    ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಜಾರಿಗೆ ಬಂದಿವೆ. ಈ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಹೀಗಾಗಿ ಬಿಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಲು ನೂಕುನುಗ್ಗಲು ಉಂಟಾಗಿದೆ. ಇಷ್ಟರ ನಡುವೆ, ಈಗಾಗಲೇ ಕೇಂದ್ರ ಸರ್ಕಾರ ವಿಧಿಸಿದ ಮಿತಿ ದಾಟಿ ಹೆಚ್ಚುವರಿ ಬಿಪಿಎಲ್ ಕಾರ್ಡ್ ವಿತರಿಸಿದ್ದೇವೆ ಎಂದು ಸರ್ಕಾರ ತಿಳಿಸಿತ್ತು. ಹೀಗಾಗಿ ಹೊಸ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರು, ಅದರಲ್ಲೂ ಆರೋಗ್ಯ ಸೇವೆ ಸಲುವಾಗಿ ಕಾರ್ಡ್ ಬಯಸಿದ್ದವರು ತಳಮಳಗೊಂಡಿದ್ದರು. ಇದೀಗ ಸರ್ಕಾರದ ಬದಲಾದ ನಿಲುವು ನಿರಾಳತೆ ತಂದಿದೆ.

    ಸಿಎಂ ಸಮ್ಮತಿ: ಸಿಎಂ ಸಿದ್ದರಾಮಯ್ಯ ಜತೆಗೆ ವಸ್ತುಸ್ಥಿತಿ ರ್ಚಚಿಸಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬ ರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

    ಆರೋಗ್ಯ ಸೇವೆಗೆ ಅಡಚಣೆಯಾಗಬಾರದು ಎಂಬ ನೆಲೆಯಲ್ಲಿ ಅರ್ಹ ಮೂರು ಲಕ್ಷ ಅರ್ಜಿಗಳನ್ನು ಪರಿಶೀಲಿಸಿ, ಈ ಪೈಕಿ ಆರೋಗ್ಯ ಸೇವೆ ಬಯಸಿದವರಿಗೆ ಬಿಪಿಎಲ್ ‘ಹೆಲ್ತ್’ ಕಾರ್ಡ್ ವಿತರಿಸಲಿದ್ದೇವೆ ಎಂದರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.64ರಷ್ಟು ಜನರು ಪಡಿತರ ವ್ಯವಸ್ಥೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿ, 84 ಲಕ್ಷ ಬಿಪಿಎಲ್ ಕಾರ್ಡ್​ಗಳಿಗೆ ಪಡಿತರ ಸೀಮಿತಗೊಳಿಸಿದೆ. ಉಳಿದ 14 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಹೊಸ ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ ವಿತರಣೆ ಸವಾಲಾಗಿದೆ.

     566 ಕೋಟಿ ರೂ. ಪಾವತಿ

    ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ತಲಾ ಐದು ಕೆಜಿ ಅಕ್ಕಿ ಬದಲು 170 ರೂ.ಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈವರೆಗೆ 27 ಜಿಲ್ಲೆಗಳ 3.45 ಕೋಟಿ ಫಲಾನುಭವಿಗಳಿಗೆ ಒಟ್ಟು 566 ಕೋಟಿ ರೂ. ಪಾವತಿಸಲಾಗಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ ಉಳಿದವರು ಜುಲೈ ಅಂತ್ಯದೊಳಗೆ ಹಣ ಪಡೆಯಲಿದ್ದಾರೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.

    ಕೇಂದ್ರಕ್ಕೆ ಮನವಿ

    ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಬಿಪಿಎಲ್ ಪಡಿತರ ಚೀಟಿ ವಿತರಣೆ ಪ್ರಮಾಣವನ್ನೂ ಹೆಚ್ಚಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ಬಿಪಿಎಲ್ ಪಡಿತರ ಚೀಟಿಗಳಿಗೆ ಮಾನ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.

    BPL Survey

    ಮನೆ ಮನೆ ಸಮೀಕ್ಷೆ

    ಆಂಧ್ರಪ್ರದೇಶ ಮಾದರಿಯಲ್ಲಿ ಬಿಪಿಎಲ್ ಪಡಿತರ ಮತ್ತು ಆರೋಗ್ಯ ಕಾರ್ಡ್ ವಿತರಿಸುವಂತೆ ಸದನ ಸಮಿತಿ ಶಿಫಾರಸಿನತ್ತ ಮಾಧ್ಯಮದವರು ಗಮನಸೆಳೆದಾಗ ಕೆ.ಎಚ್. ಮುನಿಯಪ್ಪ ಉತ್ತರಿಸಿ, ನನಗೂ ಅಂತಹ ಯೋಚನೆ ಹೊಳೆದಿದ್ದು, ಕಾರ್ಯರೂಪಕ್ಕೆ ತರುವ ಮುನ್ನ ಸ್ಪಷ್ಟತೆ ಕಂಡುಕೊಳ್ಳಬೇಕಾಗಿದೆ ಎಂದರು. ಪಡಿತರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಮನೆಮನೆ ಸಮೀಕ್ಷೆ ಕೈಗೊಳ್ಳಲು ತೀರ್ವನಿಸಲಾಗಿದೆ. ಅರ್ಹರಿಗೆ ಅನುಕೂಲ, ನಿಗದಿತ ಮಾನದಂಡ ಪೂರ್ಣ, ಪೋಲು ತಡೆಯುವುದಕ್ಕಾಗಿ ಈ ಸಮೀಕ್ಷೆ ನಡೆಸಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿದ ಐದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕಳೆದ ಮೂರು ತಿಂಗಳಿಂದ ಪಡಿತರ ಪಡೆದಿಲ್ಲ. ಅಂದರೆ, ಇವರೆಲ್ಲ ಅನರ್ಹರೆಂದಲ್ಲ, ಆರೋಗ್ಯ ಸೇವೆಗಾಗಿ ಬಿಪಿಎಲ್ ಕಾರ್ಡ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ ಎಂದರು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಡ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ. ಮನೆ, ಮನೆ ಸಮೀಕ್ಷೆ ಸಂದರ್ಭದಲ್ಲಿ ಬಿಪಿಎಲ್, ಎಪಿಎಲ್ ಕುಟುಂಬಗಳನ್ನು ಇಲಾಖೆ ಸಿಬ್ಬಂದಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಬಿಪಿಎಲ್ ಚೀಟಿ ಹೊಂದಿದವರು ಸ್ವಯಂಪ್ರೇರಿತವಾಗಿ ಅಕ್ಕಿ ಬೇಡ, ವೈದ್ಯಕೀಯ ಸವಲತ್ತಿಗೆ ಸಾಕು ಎಂದು ಹೇಳಿದರೆ ದಾಖಲಿಸಲಾಗುವುದು. ಈ ಸಮೀಕ್ಷೆಗೆ ಕಾಲಮಿತಿಯೇನೂ ವಿಧಿಸಿಲ್ಲವೆಂದು ತಿಳಿಸಿದರು.

     ರೈತರ ಜತೆಗೆ ಚರ್ಚೆ

     ನಗದು ಬದಲು ಹೆಚ್ಚುವರಿ ತಲಾ ಐದು ಕೆಜಿ ಅಕ್ಕಿ ವಿತರಣೆಗೆ ಕಾಲಾವಕಾಶ ಬೇಕು. ಮಾಸಿಕ 2.40 ಲಕ್ಷ ಅಕ್ಕಿ ಪೂರೈಕೆಗಾಗಿ ಟೆಂಡರ್ ಕರೆಯಲು ಸಿದ್ಧತೆಗಳಾಗುತ್ತಿವೆ. ಸ್ಥಳೀಯ ರೈತರಿಂದ ಭತ್ತ ಖರೀದಿಗೆ ಸರ್ಕಾರ ಹಿಂದೇಟು ಹಾಕುತ್ತಿಲ್ಲ. ಆದರೆ, ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಮಾಣವನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಬೇಕಾಗಿದೆ. ನಂತರ ರೈತ ಸಂಘಟನೆಗಳ ಮುಖಂಡರ ಸಭೆ ಕರೆದು ಯಾವ ರೀತಿ ಭತ್ತ ಬೇಕು ಎಂಬ ಬಗ್ಗೆ ರ್ಚಚಿಸಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ಆರು ಲಕ್ಷ ಟನ್ ರಾಗಿ ಖರೀದಿಗೆ ಅನುಮತಿ ನೀಡಿದೆ. ಜೋಳ ಖರೀದಿಗೆ ಅನುಮತಿ ಕೋರಲಾಗುತ್ತದೆ ಎಂದು ಮುನಿಯಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts