More

    ಸಮಾಜದ ಸತ್ಪ್ರಜೆಗಳಾಗೋಣ

    ಸಮಾಜದ ಸತ್ಪ್ರಜೆಗಳಾಗೋಣ|ಡಾ. ಕಾಂತೇಶಾಚಾರ್ಯ ಕದರಮಂಡಲಗಿ
    ಅವಳು ಸುಕನ್ಯೆ. ಶರ್ಯಾತಿರಾಜನ ಮಗಳು. ಶರ್ಯಾತಿರಾಜನು ಬೇಟೆಗಾಗಿ ಪರಿವಾರ ಸಮೇತ ಹೊರಟಾಗ ಸುಕನ್ಯೆಯೂ ಜತೆಯಲ್ಲಿ ಬರುತ್ತಾಳೆ. ಅರಣ್ಯದಲ್ಲಿ ಸಂಚರಿಸುತ್ತ ಚ್ಯವನರ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಸುಕನ್ಯೆಯು ಆಟವಾಡುತ್ತ ಒಂದು ಹುತ್ತದಲ್ಲಿ ಬೆಳಕು ಕಂಡು, ಕುತೂಹಲದಿಂದ ಬಿಲದಲ್ಲಿ ಮುಳ್ಳಿನ ಕಡ್ಡಿಯನ್ನು ಹಾಕಿ ನೋಡುತ್ತಾಳೆ. ಆದರೆ ಅಲ್ಲಿ ಚ್ಯವನಋಷಿಗಳು ತಪಸ್ಸು ಮಾಡುತ್ತಿರುತ್ತಾರೆ. ಇವಳು ಹಾಕಿದ ಕಡ್ಡಿ ಚ್ಯವನರ ಕಣ್ಣುಗಳಿಗೆ ತಗುಲಿ ಕಣ್ಣುಗಳಿಂದ ರಕ್ತ ಸುರಿಯುತ್ತದೆ. ಅದರ ಪರಿಣಾಮ ಶರ್ಯಾತಿರಾಜನ ಎಲ್ಲ ಪರಿವಾರದವರಿಗೂ ಮಲಮೂತ್ರ ಬಂಧಿತವಾಗಿಬಿಡುತ್ತದೆ. ಎಲ್ಲರೂ ಹಾಹಾಕಾರ ಮಾಡುತ್ತಾರೆ.

    ವಿಷಯ ತಿಳಿದ ರಾಜ ಚ್ಯವನರ ಬಳಿ ಧಾವಿಸಿ ಬಂದು, ಮಗಳು ಮಾಡಿದ ಅಪರಾಧಕ್ಕೆ ಕ್ಷಮೆ ಕೇಳುತ್ತಾನೆ. ನಿನ್ನ ಮಗಳು ಮಾಡಿದ ಅಪರಾಧ ನಿನ್ನ ಮಗಳಿಂದಲೇ ಸರಿಯಾಗಲಿ. ನಿನ್ನ ಮಗಳನ್ನು ನನಗೆ ಕೊಟ್ಟು ವಿವಾಹ ಮಾಡು. ಎಲ್ಲವೂ ಸರಿಯಾಗುತ್ತದೆ ಎನ್ನುತ್ತಾರೆ ಚ್ಯವನರು. ಚ್ಯವನರು ವೃದ್ಧರು. ಮಗಳು ಸುಕನ್ಯೆ ತರುಣಿ. ಮದುವೆ ಮಾಡಿಕೊಡುವುದು ಹೇಗೆ? ರಾಜನಿಗೆ ಏನು ಮಾಡಬೇಕೆಂದು ತೋಚದಂತಾಯಿತು. ಆ ಸಂದರ್ಭದಲ್ಲಿ ಸುಕನ್ಯೆಯೇ ದಿಟ್ಟವಾದ ನಿರ್ಧಾರಕ್ಕೆ ಬರುತ್ತಾಳೆ.

    ತನ್ನಿಂದ ದೇಶಕ್ಕೆ ಕೆಡಕಾಗಬಾರದೆಂದು ಯೋಚಿಸಿ, ಚ್ಯವನರನ್ನು ಮದುವೆಯಾಗಲು ಒಪ್ಪುತ್ತಾಳೆ. ಶರ್ಯಾತಿರಾಜನು ಮಗಳು ಸುಕನ್ಯೆಯನ್ನು ಚ್ಯವನರಿಗೆ ಮದುವೆ ಮಾಡಿಕೊಡುತ್ತಾನೆ. ಅದರಿಂದ ಎಲ್ಲರಿಗೂ ಒಳಿತಾಗುತ್ತದೆ. ಸುಕನ್ಯೆ ಪರಿಪರಿಯಾಗಿ ಪತಿಸೇವೆಯನ್ನು ಮಾಡಿ ಎಲ್ಲ ಸುಖ-ಸಂತೋಷಗಳನ್ನು ಪಡೆದು ತವರುಮನೆ ಹಾಗೂ ಗಂಡನಮನೆ ಎರಡಕ್ಕೂ ದೊಡ್ಡ ಕೀರ್ತಿಯನ್ನು ತರುತ್ತಾಳೆ. ಇತಿಹಾಸದಲ್ಲಿ ದೊಡ್ಡ ದೊಡ್ಡ ಪತಿವ್ರತೆಯರ ಸಾಲಿನಲ್ಲಿ ನಿಂತು ಇಂದು ಎಲ್ಲ ಗೃಹಿಣಿಯರಿಗೂ ಆದರ್ಶಳಾಗಿದ್ದಾಳೆ. ಮಹಾಭಾರತದ ಈ ಕಥೆ ಕೇಳಿದಾಗ ಮೈ ರೋಮಾಂಚನವಾಗುತ್ತದೆ. ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ ದೊಡ್ಡ ಸಂದೇಶ ನೀಡುತ್ತದೆ.

    ಸುಕನ್ಯೆಯಂತೆ ದಿಢೀರನೇ ಮದುವೆಯಾಗುವ ಪ್ರಸಂಗ ಇಂದು ನಮಗೆ ಬರುವುದಿಲ್ಲ. ಸುಕನ್ಯೆಯಂತೆ ವೃದ್ಧರನ್ನು ಮದುವೆ ಮಾಡಿಕೊಳ್ಳುವ ಸಂದರ್ಭವೂ ಬರುವುದಿಲ್ಲ. ಇಚ್ಛೆ ಇದೆಯೋ ಇಲ್ಲವೋ ದೇಶಕ್ಕಾಗಿ ಯಾರನ್ನೋ ಮದುವೆ ಆಗಬೇಕಾದ ಪರಿಸ್ಥಿತಿಯೂ ಬರಲಾರದು. ಆದರೆ ತಂದೆ-ತಾಯಿಗಳು ತೋರಿಸಿದ, ತನಗೆ ಇಷ್ಟನಾದ ಯೋಗ್ಯ ವ್ಯಕ್ತಿಯನ್ನು ಯೋಗ್ಯ ರೀತಿಯಲ್ಲಿ ಮದುವೆಯಾಗಿ ತಂದೆ-ತಾಯಿಗಳು ಹೆಮ್ಮೆಪಡುವಂತಹ ಮಗಳಾದರೆ ಸಾಕು, ನಾವೂ ಕಲಿಯುಗದ ಸುಕನ್ಯೆಯರೇ. ಹತ್ತಾರು ವರ್ಷ ನಮಗಾಗಿ ಹಗಳಿರುಳು ಕಷ್ಟಪಟ್ಟು, ಹೊಟ್ಟೆ ಕಟ್ಟಿಯಾದರೂ ವಿದ್ಯಾಭ್ಯಾಸ ಕೊಡಿಸಿ, ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದಂತಹ ತಂದೆ-ತಾಯಿಗಳಿಗೆ ಪ್ರತಿಯಾಗಿ ನಾವೇನು ಮಾಡಲು ಸಾಧ್ಯ? ಯಾವುದೋ ಆಕರ್ಷಣೆಗೆ ಒಳಗಾಗಿ, ತಂದೆ-ತಾಯಿಗಳನ್ನೂ ಧಿಕ್ಕರಿಸಿ, ಯಾರದ್ದೋ ಜತೆ ಮದುವೆಯಾಗಿ, ತಂದೆ-ತಾಯಿಗಳು ಸಮಾಜದಲ್ಲಿ ತಲೆ ಎತ್ತದಂತೆ ಮಾಡುವ ದುಸ್ಸಾಹಸ ಎಂದಿಗೂ ಬೇಡ. ಸಮಾಜದಲ್ಲಿ ನಮ್ಮನ್ನು ತಲೆ ಎತ್ತಿ ನಿಲ್ಲಿಸಿದ ತಂದೆ-ತಾಯಿಗಳನ್ನು ನಾವೂ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳನ್ನಾಗಿ ಮಾಡೋಣ. ತಂದೆ-ತಾಯಿಗಳ ಕೀರ್ತಿಯನ್ನು ಎತ್ತರಿಸೋಣ. ನಾವೂ ಸಮಾಜದ ಸತ್ಪ್ರಜೆಗಳಾಗೋಣ.

    ಕೇವಲ 4 ಪದಾರ್ಥಗಳಿಂದ ಈ ಸಿಹಿ ತಿಂಡಿ ತಯಾರಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts