More

    ಕೈ ಮುಗಿದು ಒಳಗೆ ಬಾ ಮತದಾರನೆ.. ಪರಿಸರ, ಸಾಮಾಜಿಕ ಜಾಗೃತಿ ಸಾರುವ ಮತಗಟ್ಟೆಗಳು ಸಂಪ್ರದಾಯಗಳ ಪ್ರತಿಬಿಂಬ

    ಡಿ.ಎಂ.ಮಹೇಶ್, ದಾವಣಗೆರೆ
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಜಿಲ್ಲೆಯ 63 ಮತಗಟ್ಟೆಗಳು ವಿಶೇಷತೆ ಹಾಗೂ ಸುಂದರ ಪರಿಕಲ್ಪನೆಗಳೊಂದಿಗೆ ಮತದಾರರನ್ನು ಸೆಳೆಯುತ್ತಿವೆ. ಬಾಗಿಲೊಳು ಕೈಮುಗಿದು ಒಳಗೆ ಬಾ ಮತದಾರನೆ ಎನ್ನುವಷ್ಟರ ಮಟ್ಟಿಗೆ ಆಕರ್ಷಣೀಯವಾಗಿವೆ.
    ಸಾಂಪ್ರದಾಯಿಕ ಮತಗಟ್ಟೆಗಳು ಬುಡಕಟ್ಟು ಸಂಪ್ರದಾಯವನ್ನು ಪ್ರತಿಬಿಂಬಿಸಿದರೆ, ಒಂದೊಂದು ಧ್ಯೇಯದ ಆಧಾರದಡಿ ತೆರೆಯಲಾದ ಕೆಲವು ಬೂತ್‌ಗಳು ಸಾಮಾಜಿಕ ಜಾಗೃತಿ ಮೂಡಿಸಲಿವೆ. ಜಿಲ್ಲಾಡಳಿತ, ಪೊಲೀಸ್, ಕೃಷಿ, ತೋಟಗಾರಿಕೆ, ಕೈಮಗ್ಗ, ಜಲಾನಯನ ಇತರೆ ಇಲಾಖಾಧಿಕಾರಿಗಳು, ಪಿಡಿಒಗಳ ಶ್ರಮದ ಜತೆಗೆ ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ.

    ಧ್ಯೇಯ ಆಧಾರಿತ ಬೂತ್‌ಗಳು:
    ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದ (ಮತಗಟ್ಟೆ ಸಂ. 238) ಸರ್ಕಾರಿ ಶಾಲೆಗೆ ಬಂದರೆ ಮಾದರಿ ಜಲಾನಯನ ಪ್ರಾತ್ಯಕ್ಷಿಕೆ ಕಣ್ತುಂಬಿಕೊಳ್ಳಬಹುದು. ವರುಣನ ದರ್ಶನವಿಲ್ಲದೆ ನೀರಿಗಾಗಿ ಹಾಹಾಕಾರ ಎದ್ದಿರುವ ಇಂದಿನ ಬರಗಾಲದ ಸನ್ನಿವೇಶದಲ್ಲಿ ವ್ಯರ್ಥವಾಗುವ ಮಳೆ ನೀರು ಸಂಗ್ರಹಿಸಿ, ಇಂಗಿಸುವ ಮಳೆ ನೀರು ಕೊಯ್ಲು ಮಾದರಿ ಎಲ್ಲರಲ್ಲೂ ನೀರೆಚ್ಚರವನ್ನು ನೀಡಲಿದೆ.
    ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ಮತಗಟ್ಟೆ ಸಂ. 41ರಲ್ಲಿ (ಸರ್ಕಾರಿ ಹಿ.ಪ್ರಾ.ಶಾಲೆ)ಯಲ್ಲೂ ಇಂಥಹ ಪ್ರಾತ್ಯಕ್ಷಿಕೆ ರಚಿಸಲಾಗಿದೆ.
    ದಾವಣಗೆರೆ ಮೆಕ್ಕೆಜೋಳ ಕಣಜವಾಗಿದ್ದರ ಧ್ಯೋತಕವಾಗಿ ದಾವಣಗೆರೆಯ ಶ್ರೀಮತಿ ಗೌರಮ್ಮ ಡಿಎಂ ಹನಗೋಡಿಮಠ ಶಾಲೆ (ಮತಗಟ್ಟೆ ಸಂ. 139)ಯಲ್ಲಿ ಮೆಕ್ಕೆಜೋಳದಿಂದಲೇ ಸ್ಥಾಪಿಸಲಾದ ಸ್ವಾಗತ ಕಮಾನು ಹಾಗೂ ಕೃಷಿ ಮಾಹಿತಿ ಫಲಕಗಳಿವೆ.
    ದಾವಣಗೆರೆಯ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕಚೇರಿಯ ಮತಗಟ್ಟೆ ಸಂಖ್ಯೆ 201ರ ಬಳಿ ಸಂಚಾರ ಜಾಗೃತಿಯ ನಿಯಮಗಳ ಕುರಿತಾದ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಮತಗಟ್ಟೆಯ ಮಾರ್ಗದಲ್ಲೇ ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದಾದ ಅಪಘಾತದ ಬೊಂಬೆಗಳ ಮಾದರಿ ನಿರ್ಮಿಸಲಾಗಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಜಾಗೃತಿಯ ಫಲಕಗಳೊಂದಿಗೆ ಲೂರ್ಡ್ಸ್ ಬಾಲಕರ ಶಾಲೆಯ ಮತಗಟ್ಟೆ ಸಜ್ಜಾಗಿದೆ.
    ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ 12ನೇ ಮತಗಟ್ಟೆಯು ಇಂದಿನ ಮಕ್ಕಳಿಗೆ ಭಾರತ್ ಸ್ಕೌಟ್-ಗೈಡ್ಸ್‌ನ ಅವಶ್ಯಕತೆಯನ್ನು ಸಾರುವಂತಿದೆ. ಅದಕ್ಕೆ ಪೂರಕವಾದ ಮಾಹಿತಿ ಫಲಕಗಳು ಅಲ್ಲಿ ಕಾಣಸಿಗಲಿವೆ.
    ಅರೆಮಲ್ನಾಡು ಪ್ರದೇಶವಾದ ಚನ್ನಗಿರಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆಯನ್ನು ಉತ್ತೇಜಿಸುವತ್ತ, ಅಲ್ಲಿನ ಬಾಲಕಿಯರ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 160 ಗಮನ ಸೆಳೆಯುತ್ತಿದೆ.
    ದಾವಣಗೆರೆಯ ಜಾಲಿನಗರದ ಜನತಾ ವಿದ್ಯಾಲಯ ಶಾಲೆ (ಮತಗಟ್ಟೆ ಸಂ.169)ಯಲ್ಲಿ ಪರಿಸರಸ್ನೇಹಿ ಮಾದರಿ ಮತಗಟ್ಟೆ ತೆರೆಯಲಾಗಿದೆ. ಇಲ್ಲಿ ಮಣ್ಣಿನ ಒಲೆ, ಮಡಕೆ, ಹೂಜಿ, ಪಾತ್ರೆಗಳು, ಬಿದಿರಿನಿಂದ ಹೆಣೆದ ಮೊರ, ಹೂವಿನ ಬುಟ್ಟಿ, ಎತ್ತಿನ ಬಂಡಿ, ಬೀಸಣಿಕೆ, ಹಳೆಯ ಬಾವಿ, ಹಳ್ಳಿ ಮನೆಯ ಚಿತ್ರಣವುಳ್ಳ ಇಲ್ಲಿ ‘ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಬಟ್ಟೆ ಬ್ಯಾಗ್ ಬಳಸಿ’ ಎಂಬ ಸಂದೇಶವಿದೆ. ಮತಗಟ್ಟೆ ಸಿಬ್ಬಂದಿಗೆ ಮಡಕೆಯಲ್ಲೇ ಕುಡಿವ ನೀರಿರಿಸಲಾಗಿದೆ!
    ದಾವಣಗೆರೆಯ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕಚೇರಿಯ 200ನೇ ಮತಗಟ್ಟೆಯಲ್ಲೂ ಆರೋಗ್ಯಕ್ಕೆ ಹಾನಿಕರವಾದ ಪ್ಲಾಸ್ಟಿಕ್ ಬದಲಾಗಿ ಭೂಮಿಯಲ್ಲಿ ಕರಗುವ ಉತ್ಪನ್ನಗಳನ್ನು ಬಳಸುವ ಸಂದೇಶದ ಮೂಡಿಸಲಾಗಿದೆ. ಹೊನ್ನಾಳಿ ತಾಲೂಕು ಚೀಲೂರಿನ 232ನೇ ಮತಗಟ್ಟೆಯಲ್ಲಿ ಪರಿಸರ ಪೂರಕ ಜಾಗೃತಿ ಮೂಡಿಸಲಾಗಿದೆ.
    ಸಾಂಪ್ರದಾಯಿಕ ಮತಗಟ್ಟೆಗಳು
    ಚನ್ನಗಿರಿ ತಾಲೂಕು ಅಸ್ತಾಪನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಸಿದ್ಧಪಡಿಸಿದ ವಿಶೇಷ ಹಾರಗಳಿಂದ ಅಲ್ಲಿನ ಮತಗಟ್ಟೆ ಸಂಖ್ಯೆ 100 (ಸರ್ಕಾರಿ ಎಸ್ಟಿ ಆಶ್ರಮ) ಅಲಂಕಾರಗೊಂಡಿದೆ. ಕಾಂಪೌಂಡ್‌ನಿಂದ ಬೂತ್‌ವೆರಗೂ ಚಪ್ಪರ ಹಾಕಿ, ತಳಿರು ತೋರಣ ಹಾಕಲಾಗಿದೆ.
    ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಮತಗಟ್ಟೆ ಸಂ. 98( ಸರ್ಕಾರಿ ಹಿಪ್ರಾ ಶಾಲೆ) ಈ ಭಾಗದ ತೋಟಗಾರಿಕೆ ಬೆಳೆ ವೀಳ್ಯದೆಲೆ ಹಾಗೂ ಬಾಳೆ ಗಿಡಗಳಿಂದ ಸಿಂಗಾರಗೊಂಡಿದೆ.
    ಜಗಳೂರು ತಾಲೂಕಿನ ಅಣಬೂರು ಗೊಲ್ಲಹಟ್ಟಿಯ 76ನೇ ಮತಗಟ್ಟೆ ಗೊಲ್ಲರ ಸಮುದಾಯ ಪ್ರತಿಬಿಂಬಿಸುವ ಚಿತ್ರಣದೊಂದಿಗೆ ಗಮನ ಸೆಳೆಯುತ್ತಿದೆ. ಹೊನ್ನಾಳಿ ತಾಲೂಕಿನ ಆಂಜನೇಯಪುರ (ಮತಗಟ್ಟೆ 92) ಗ್ರಾಮದಲ್ಲಿ ಬಂಜಾರ ಸಮುದಾಯದ ಉಡುಗೆ-ತೊಡುಗೆ ಸಂಪ್ರದಾಯದ ಪ್ರತಿಬಿಂಬವಾಗಿದೆ.
    ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಐದರಂತೆ ಒಟ್ಟು 35 ಮತಗಟ್ಟೆಗಳು ಸಖಿ ಬೂತ್ ಆಗಿವೆ. ಎಲ್ಲ ಮತಗಟ್ಟೆಗಳು ಪಿಂಕ್ ಬಣ್ಣದಲ್ಲಿ  ಮಿಂದೆದ್ದಿವೆ. ಬಣ್ಣಗಳ ಬೆಲೂನ್‌ಗಳ ಕಮಾನುಗಳಿಂದ ಸಿಂಗಾರಗೊಂಡ ಈ ಬೂತ್‌ಗಳು ಮಹಿಳೆಯರನ್ನು ಸೆಳೆಯುತ್ತಿವೆ. ಉಳಿದಂತೆ ಜಿಲ್ಲೆಯಲ್ಲಿ ಯುವ ನಿರ್ವಹಣೆಯ 7 ಮತಗಟ್ಟೆ, ಏಳು ವಿಕಲಾಂಗರ ಬೂತ್‌ಗಳು ಜಿಲ್ಲೆಯಲ್ಲಿವೆ.

    ಸ್ವೀಪ್ ಸಮಿತಿ ಜಾಗೃತಿ ಕಾರ್ಯಕ್ರಮಗಳಿಗೆ 26 ಲಕ್ಷ ರೂ. ನೀಡಲಾಗಿದೆ. ಮತಗಟ್ಟೆಗಳ ಆಕರ್ಷಣೆ, ಸಿದ್ಧತೆಗೆ ತಲಾ ವಿಧಾನಸಭೆಗೆ 1 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಇನ್ನುಳಿದಂತೆ ಆಯಾ ಗ್ರಾಪಂಗಳೇ ಉಳಿದ ಹಣ ಹೊಂದಿಸಿಕೊಂಡು ಮತಗಟ್ಟೆಗಳನ್ನು ಸಿಂಗರಿಸಿಕೊಂಡಿವೆ.
    ಸುರೇಶ್ ಬಿ. ಇಟ್ನಾಳ್
    ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts