

ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯರ ಬೌಲಿಂಗ್ ದಾಳಿಗೆ ನಲುಗಿದ್ದು, 32 ರನ್ಗಳ ಸೋಲುಂಡಿದೆ. ಇನ್ನೂ ಭಾರತ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೆರ್ಫಿ ವಾಂಡರ್ಸೆ 6 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.
ಗಾಯದ ಸಮಸ್ಯೆಯಿಂದ ಹೊರಬಿದ್ದ ವನಿಂದು ಹಸರಂಗಾ ಅವರ ಬದಲಾಗಿ ತಂಡದಲ್ಲಿ ಸ್ಥಾನ ಪಡೆದ ಜೆರ್ಫಿ ವಾಂಡರ್ಸೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಜೆರ್ಫಿ ಹಲವು ವಿಚಾರಗಳ ಕುರಿತು ಹಂಚಿಕೊಂಡಿದ್ದಾರೆ.
ವಿಕೆಟ್‌ನಲ್ಲಿ ನೆರವು ಇತ್ತು ಆದ್ದರಿಂದ ನಾನು ಉತ್ತಮ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಕೆಲವು ಅಂಶಗಳನ್ನು ಪ್ರಯತ್ನಿಸಿದೆ. ಇದು ನನ್ನ ಮೊದಲ ಪಂದ್ಯವಾಗಿದ್ದರಿಂದ ನಾನು ಉತ್ತಮವಾಗಿ ಬೌಲ್ ಮಾಡಬೇಕಾಯಿತು. ಮೊದಲ ವಿಕೆಟ್ ಪಡೆದ ನಂತರ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತ ಹೋಯಿತು. ನಾನು ಸರಿಯಾಗಿ ಬೌಲಿಂಗ್ ಮಾಡುತ್ತಿದ್ಧೇನೆ ಎಂದು ಅನಿಸಿತು. ದೇವರ ದಯೆಯಿಂದ ನಾನು ಆರು ವಿಕೆಟ್ಗಳನ್ನು ಪಡೆಯಲು ಸಾಧ್ಯವಾಯಿತು. ಇದು ನನಗೆ ಖುಷಿ ನೀಡಿತು ಎಂದು ವಾಂಡರ್ಸೆ ಹೇಳಿದ್ದಾರೆ.
2015ರ ಡಿಸೆಂಬರ್ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಪರ ಪದಾರ್ಪಣೆ ಮಾಡಿದ ವಾಂಡರ್ಸೆ ಈವರೆಗೂ 22 ಏಕದಿನ ಪಂದ್ಯಗಳನ್ನು ಆಡಿದ್ದು, ಶ್ರೀಲಂಕಾದ ಪಾಲಿಗೆ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಪಾಯಕಾರಿ ಎನ್ನಿಸಿದ್ದ ರೋಹಿತ್ ಶರ್ಮಾ, ಶುಭಮನ್ ಗಿಲ್, ಶಿವಂ ದುಬೆ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ರನ್ನು ಔಟ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.