ಬೆಂಗಳೂರು ಕಂಬಳಕ್ಕೆ ದಿನಗಣನೆ; ಇಲ್ಲಿವೆ ಕುತೂಹಲಕಾರಿ ಸಂಗತಿಗಳು!

Untitled design (15)
Published on

ಬೆಂಗಳೂರು: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಉತ್ಸವ ಭರ್ಜರಿಯಿಂದ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಭಾಗವಹಿಸುವ ಮುಖೇನ 'ಬೆಂಗಳೂರು ಕಂಬಳ'ಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ. ಇದೇ ನವೆಂಬರ್​ 25-26 ರಂದು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಜನತೆ ಭಾರೀ ಉತ್ಸಾಹ ತೋರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಬೆಂಗಳೂರು ಕಂಬಳದ ಬಗ್ಗೆ ಒಂದಷ್ಟು ಕುತೂಹಲಕಾರಿ ಇಲ್ಲಿದೆ ಗಮನಿಸಿ.

ಕರಾವಳಿ ಭಾಗಕ್ಕೆ ಸೇರಿದ ಸುಮಾರು 15 ರಿಂದ 20 ಲಕ್ಷ ಮಂದಿ ಸಿಲಿಕಾನ್​ ಸಿಟಿಯಲ್ಲಿ ವಾಸ್ತವ್ಯ ಹೂಡಿದ್ದು, ಎಲ್ಲರೂ ಕೂಡ ಕಂಬಳದಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಈ ಬಾರಿ ವಿಜೃಂಭಣೆಯಿಂದ ನಡೆಯಲಿರುವ ಬೆಂಗಳೂರು ಕಂಬಳದಲ್ಲಿ ಬರೋಬ್ಬರಿ 200 ಕೋಣಗಳು ಭಾಗಿಯಾಗಲಿವೆ ಎಂಬುದು ಮತ್ತಷ್ಟು ವಿಶೇಷ.

ಇನ್ನು ಈ ಬಗ್ಗೆ ಮಾತನಾಡಿರುವ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, "ಸುಮಾರು 228 ಜೋಡಿಗಳು ನೋಂದಾಯಿಸಿಕೊಂಡಿದ್ದವು. ಆದ್ರೆ, ಅದರ ಪೈಕಿ 200 ಜತೆ ಕೋಣಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ. ಸಾಮಾನ್ಯವಾಗಿ ಕೋಣಗಳು ಓಡುವ ಪಥ 147 ಮೀ. ಉದ್ದವಿರುತ್ತದೆ. ಆದರೆ, ಇಲ್ಲಿ 155 ಮೀ. ಉದ್ದದ ಕರೆಯನ್ನು ನಿರ್ಮಿಸಲಾಗಿದೆ" ಎಂದು ಹೇಳಿದರು.

"ಕಂಬಳಕ್ಕೆ 77.50- 78 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆಯಿದ್ದು, ಸರ್ಕಾರ ಒಂದು ಕೋಟಿ ರೂ. ಅನುದಾನ ಪ್ರಕಟಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳು ಹಣ ಸಹಾಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕೈಜೋಡಿಸಿವೆ" ಎಂದು ಅಶೋಕ್​ ತಿಳಿಸಿದರು.

ವಿಜೇತರ ಬಹುಮಾನ ವಿವರ ಹೀಗಿದೆ: ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜತೆಗೆ 2.8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net