More

  ಅಕ್ರಮದ ವಿರುದ್ಧ ಸರ್ಜಿಕಲ್ ದಾಳಿ: ‘ಕೈ’ ಸುಡುತ್ತಿರುವುದು ಏಕೆ ನ್ಯಾಷನಲ್ ಹೆರಾಲ್ಡ್ ಹಗರಣ?

  ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಶೇಕಡ 76 ಪಾಲುದಾರಿಕೆ ಹೊಂದಿರುವ ಯಂಗ್ ಇಂಡಿಯಾ ಸಂಸ್ಥೆಯ 751.9 ಕೋಟಿ ರೂ. ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಇದರ ಬೆನ್ನಲ್ಲೇ, ರಾಜಕೀಯ ಜಿದ್ದಾಜಿದ್ದಿ, ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.

  ‘ದಿ ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನು ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ (1938ರ ಸೆಪ್ಟೆಂಬರ್ 9) ಆರಂಭಿಸಿದರು. ಇದು ಆಂಗ್ಲ ಭಾಷೆಯ ಪತ್ರಿಕೆಯಾಗಿತ್ತು. ‘ಊಛಿಛಿಛಟಞ ಜಿಠ ಜ್ಞಿ ಕಛ್ಟಿಜ್ಝಿ, ಈಛ್ಛಿಛ್ಞಿಛ ಜಿಠಿ ಡಿಜಿಠಿಜ ಅ್ಝ ್ಗu Mಜಿಜಜಠಿ’ ಎಂಬ ಅಡಿಬರಹ ಹೊಂದಿತ್ತು. ಕೆ.ರಾಮರಾವ್ ಪತ್ರಿಕೆಯ ಮೊದಲ ಸಂಪಾದಕರು. ಕ್ವಿಟ್ ಇಂಡಿಯಾ ಚಳವಳಿ ವೇಳೆ, ಬ್ರಿಟಿಷರ ವಿರುದ್ಧ ಸಂಪಾದಕೀಯ ಬರೆದ ಕಾರಣ 1942- 45ರ ನಡುವಿನ ಅವಧಿಯಲ್ಲಿ ಪತ್ರಿಕೆ ಸ್ಥಗಿತಗೊಂಡಿತ್ತು. 1945ರಲ್ಲಿ ಮತ್ತೆ ಪತ್ರಿಕೆ ಪ್ರಕಟವಾಗಲಾರಂಭಿಸಿತು. 1946ರಿಂದ 1950ರತನಕ ನೆಹರು ಅಳಿಯ, ಇಂದಿರಾ ಗಾಂಧಿ ಪತಿ ಫಿರೋಜ್ ಗಾಂಧಿ ಪತ್ರಿಕೆಯ ಮಾತೃಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್​ನ (ಎಜೆಎಲ್) ಎಂ.ಡಿ. ಆಗಿದ್ದರು. 1946-78ರ ಅವಧಿಯಲ್ಲಿ ಎಂ. ಚಲಪತಿ ರಾವ್ ಸಂಪಾದಕರಾಗಿದ್ದರು. 1968ರಲ್ಲಿ ಪತ್ರಿಕೆ ದೆಹಲಿ ಹಾಗೂ ಲಖನೌ ಆವೃತ್ತಿ ಹೊಂದಿತ್ತು. ಹೆಚ್ಚುಕಡಿಮೆ ಇದೇ ಅವಧಿಯಲ್ಲಿ ಲಖನೌನಿಂದ ದೆಹಲಿಯ ‘ಹೆರಾಲ್ಡ್ ಹೌಸ್’ಗೆ ಪತ್ರಿಕಾ ಕಚೇರಿ ಸ್ಥಳಾಂತರಗೊಂಡಿತ್ತು. ಹಿಂದಿಯಲ್ಲಿ ‘ನವಜೀವನ್’, ಉರ್ದುವಿನಲ್ಲಿ ‘ಖ್ವಾಮಿ ಆವಾಜ್’ ಎಂಬ ಪತ್ರಿಕೆಯನ್ನೂ ಕಂಪನಿ ಪ್ರಕಟಿಸಲಾರಂಭಿಸಿತು. ಕೊನೆಗೆ ಆಧುನಿಕತೆಗೆ ಒಗ್ಗಿಕೊಳ್ಳಲಾಗದೆ ಪತ್ರಿಕೆ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ 2008ರ ಏಪ್ರಿಲ್ 1ರಂದು ಎಜೆಎಲ್ ಪ್ರಕಟಿಸಿತು. ಅಂದು ಟಿ.ವಿ. ವೆಂಕಟಾಚಲಂ ಪತ್ರಿಕೆಯ ಸಂಪಾದಕರಾಗಿದ್ದರು.

  ಎಜೆಎಲ್ ಕಂಪನಿ ಪುನಶ್ಚೇತನದ ಪ್ರಯತ್ನ ನಡೆಯಿತಾದರೂ, ಅದು ಕೈಗೂಡಲಿಲ್ಲ. ಪತ್ರಿಕೆ ನಷ್ಟ ಹೊಂದುತ್ತಿದ್ದಂತೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ರಿಯಲ್ ಎಸ್ಟೇಟ್ ಕಂಪನಿಯಾಗಿ ಬದಲಾಯಿತು. ಅದನ್ನು ಸೋನಿಯಾ, ರಾಹುಲ್ ಮಾಲೀಕತ್ವದ ‘ಯಂಗ್ ಇಂಡಿಯಾ’ ಕಂಪನಿ ಸ್ವಾಧೀನಪಡಿಸಿಕೊಂಡಿತು.

  ಕೋರ್ಟ್ ಕಟಕಟೆಯಲ್ಲಿ: ಕಂಪನಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ 2012ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೂರು ದಾಖಲಿಸಿದ ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ದಿನಪತ್ರಿಕೆ ಉದ್ದೇಶಕ್ಕೆ ಸರ್ಕಾರ ನೀಡಿದ ಭೂಮಿಯನ್ನು ಕಂಪನಿ ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಂಡಿದೆ ಹಾಗೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದ ‘ಯಂಗ್ ಇಂಡಿಯಾ’ ಕಂಪನಿಯಿಂದ ಎಜೆಎಲ್​ಗೆ 2011ರಲ್ಲಿ 90 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿರುವುದು ಕಾನೂನುಬಾಹಿರ. ರಾಜಕೀಯ ಪಕ್ಷವು ವಾಣಿಜ್ಯ ಉದ್ದೇಶಕ್ಕೆ ಸಾಲ ನೀಡುವಂತಿಲ್ಲ ಎಂದು ಸ್ವಾಮಿ ವಾದಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 2014ರಲ್ಲಿ ಸೋನಿಯಾ, ರಾಹುಲ್​ಗೆ ಸಮನ್ಸ್ ಜಾರಿಗೊಳಿಸಿತು. ಈ ನಡುವೆ, 2014ರ ಆಗಸ್ಟ್​ನಲ್ಲಿ ಜಾರಿ ನಿರ್ದೇಶನಾಲಯದಿಂದ ಪ್ರಕರಣದ ತನಿಖೆ ಆರಂಭವಾಯಿತು. ಸೋನಿಯಾ, ರಾಹುಲ್ ಕೋರ್ಟ್ ಕಟಕಟೆ ಏರಬೇಕಾಗಿ ಬಂದಾಗ, ಕಾಂಗ್ರೆಸ್ ನಾಯಕರೆಲ್ಲ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದರು. ಇದರ ಹಿಂದೆ ಕೇಂದ್ರದ ಕೈವಾಡ ಇದೆ ಎಂದು ಆರೋಪಿಸಿದರು. ಅಲ್ಲದೆ, ಸಂಸತ್ತಿನ ಉಭಯ ಸದನದಲ್ಲಿ ಕೋಲಾಹಲ ಸೃಷ್ಟಿಸಿ ಕಲಾಪ ನಡೆಯದಂತೆ ತಡೆಯೊಡ್ಡಿದ್ದು ಈಗ ಇತಿಹಾಸ.

  ಹಂತ 1: ಎಜೆಎಲ್ ಕಂಪನಿಯು ಎಐಸಿಸಿ (ಕಾಂಗ್ರೆಸ್ ಪಕ್ಷ) ಯಿಂದ ಶೂನ್ಯ ಬಡ್ಡಿಗೆ 90 ಕೋಟಿ ರೂ.ಗೂ ಅಧಿಕ ಸಾಲ ಪಡೆದುಕೊಳ್ಳುತ್ತದೆ. ಕಾನೂನು ಪ್ರಕಾರ ರಾಜಕೀಯ ಪಕ್ಷವೊಂದು ಈ ರೀತಿ ವಾಣಿಜ್ಯ ಉದ್ದೇಶಕ್ಕೆ ಸಾಲ ನೀಡುವಂತಿಲ್ಲ. ಅಂದು ಎಜೆಎಲ್ ಅಧ್ಯಕ್ಷರಾಗಿದ್ದ ಮೋತಿಲಾಲ್ ವೋರಾ ಎಐಸಿಸಿಯ ಖಜಾಂಚಿ ಕೂಡ ಆಗಿದ್ದರು.

  ಹಂತ 2: 2011ರ ಫೆಬ್ರವರಿ 20ರಂದು ಎಜೆಎಲ್​ನ ಆಡಳಿತ ಮಂಡಳಿ ‘ಯಂಗ್ ಇಂಡಿಯಾ’ ಕಂಪನಿ ಹೆಸರಿಗೆ ಷೇರುಗಳನ್ನು ವರ್ಗಾವಣೆ ಮಾಡಿದೆ. ‘ಯಂಗ್ ಇಂಡಿಯಾ’ ಕಂಪನಿ ಯಾವುದೇ ಪತ್ರಿಕೆಯನ್ನಾಗಲಿ, ನಿಯತಕಾಲಿಕೆಯನ್ನಾಗಲೀ ಪ್ರಕಟಿಸುತ್ತಿರಲಿಲ್ಲ. ಇದೇ ಅವಧಿಯಲ್ಲಿ ರಾಹುಲ್ ಗಾಂಧಿ ತಮ್ಮ ಹೆಸರಿನಲ್ಲಿದ್ದ 2,62,411 ಎಜೆಎಲ್ ಷೇರುಗಳನ್ನು ಸಹೋದರಿ ಪ್ರಿಯಾಂಕಾ ಹೆಸರಿಗೆ ವರ್ಗಾವಣೆ ಮಾಡಿದ್ದರು. ಇದಾಗಿಯೂ, ರಾಹುಲ್ ಬಳಿ 3 ಲಕ್ಷಕ್ಕೂ ಅಧಿಕ ಷೇರುಗಳು ಉಳಿದುಕೊಂಡಿವೆ.

  ಹಂತ 3: ಎಜೆಎಲ್ ಸ್ವಾಮ್ಯದ 7 ಮಹಡಿ ಕಟ್ಟಡ ‘ಹೆರಾಲ್ಡ್ ಹೌಸ್’ನ 2 ಮಹಡಿ ಗಳನ್ನು ಪಾಸ್​ಪೋರ್ಟ್ ಸೇವಾ ಕೇಂದ್ರಕ್ಕೆ ಬಾಡಿಗೆಗೆ ನೀಡಲಾಗಿತ್ತು.

  ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?
  * ಸೋನಿಯಾ ಹಾಗೂ ರಾಹುಲ್ ಗಾಂಧಿ ಇಬ್ಬರೂ ‘ಯಂಗ್ ಇಂಡಿಯಾ’ ಕಂಪನಿಯ ತಲಾ ಶೇಕಡ 38 ಷೇರುಗಳನ್ನು ಹೊಂದಿದ್ದರು. ಇವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಕಂಪನಿಯನ್ನು ಸ್ವಾಧೀನಪಡಿಸಿಕೊಂಡರು. ಇದರಂತೆ, ‘ನ್ಯಾಷನಲ್ ಹೆರಾಲ್ಡ್’ ಹಾಗೂ ‘ಖ್ವಾಮಿ ಆವಾಜ್’ ಪತ್ರಿಕೆಗಳ ಮಾಲೀಕತ್ವವೂ ಅವರ ಪಾಲಾಯಿತು. ಎಜೆಎಲ್ ಹೆಸರಿನಲ್ಲಿ ದೆಹಲಿ ಹಾಗೂ ಉತ್ತರಪ್ರದೇಶದ ವಿವಿಧೆಡೆ ಭಾರಿ ಮೌಲ್ಯದ ಸ್ಥಿರಾಸ್ತಿಗಳಿದ್ದವು. ಇವೆಲ್ಲವೂ 2008-12ರ ನಡುವಿನ ಅವಧಿಯಲ್ಲಿ ನಡೆದ ವ್ಯವಹಾರಗಳು. ರಾಹುಲ್ ಗಾಂಧಿ 2008ರಲ್ಲೇ ಎಜೆಎಲ್ ಕಂಪನಿಯ ಷೇರು ಖರೀದಿಸಿದ್ದರು. ಆದರೆ, ಇದನ್ನು 2009ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಅವರು ಬಹಿರಂಗಗೊಳಿಸಿರಲಿಲ್ಲ.

  * ರಿಜಿಸ್ಟ್ರಾರ್ ಆಫ್ ಕಂಪನೀಸ್​ಗೆ ‘ಯಂಗ್ ಇಂಡಿಯಾ’ ಸಲ್ಲಿಸಿದ ದಾಖಲೆಗಳ ಪ್ರಕಾರ, ಕಂಪನಿಯ ಷೇರುದಾರರ ಸಭೆ ಸೋನಿಯಾ ಗಾಂಧಿಯವರ ಸರ್ಕಾರಿ ನಿವಾಸ 10 ಜನಪಥ್​ನಲ್ಲಿ ಆಗಿತ್ತು. ಸರ್ಕಾರಿ ಬಂಗಲೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದೆಂಬ ಕಾನೂನಿದ್ದು, ಅದನ್ನು ಉಲ್ಲಂಘಿಸಿದಂತಾಗಿದೆ.

  * ಎಜೆಎಲ್ ಹಾಗೂ ‘ಯಂಗ್ ಇಂಡಿಯಾ’ ಕಂಪನಿ ನಡುವಿನ ವ್ಯವಹಾರ ಕಂಪನಿ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 467, 193ನ್ನು ಉಲ್ಲಂಘಿಸಿದೆ. ಅಷ್ಟೇ ಅಲ್ಲ, ಚುನಾವಣಾ ಕಾನೂನು ಹಾಗೂ ಸರ್ಕಾರಿ ನಿವಾಸ ಹಂಚಿಕೆ ನಿಯಮಗಳನ್ನೂ ಉಲ್ಲಂಘಿಸಿದೆ.

  * ಉಭಯ ಕಂಪನಿಗಳ ನಡುವಿನ ಒಪ್ಪಂದ 1,600 ಕೋಟಿ ರೂ. ಮೌಲ್ಯದ್ದಾಗಿತ್ತು. ವಾಸ್ತವದಲ್ಲಿ ‘ಯಂಗ್ ಇಂಡಿಯಾ’ ಕಂಪನಿಗೆ 50 ಲಕ್ಷ ರೂ. ಹಾಗೂ ಕಾಂಗ್ರೆಸ್ ಪಕ್ಷಕ್ಕೆ 90 ಕೋಟಿ ರೂ.ಗಳಿಗಷ್ಟೇ ಎಜೆಎಲ್ ಕಂಪನಿ ಬಾಧ್ಯಸ್ಥವಾಗಿತ್ತು.

  ರಾಜಕೀಯ ಸೇಡು ಎಂದ ಕಾಂಗ್ರೆಸ್
  ನ್ಯಾಷನಲ್ ಹೆರಾಲ್ಡ್ ಮೇಲಿನ ದಾಳಿ ‘ಸೇಡಿನ ರಾಜಕೀಯ’ ಎಂದು ಖಂಡಿಸಿರುವ ಕಾಂಗ್ರೆಸ್, ಯಾವುದೇ ಹಣಕಾಸು ದುರ್ಬಳಕೆ ನಡೆದಿಲ್ಲ ಎಂದಿದೆ. ಆರ್ಥಿಕವಾಗಿ ದುರ್ಬಲವಾಗಿದ್ದ ಎಜೆಎಲ್​ಗೆ 2001-02ರ ಹಾಗೂ 2010-11ರ ನಡುವೆ ಮತ್ತು ನಂತರ 2011ರಲ್ಲಿ ಕಾಂಗ್ರೆಸ್ ಪಕ್ಷ 90 ಕೋಟಿ ರೂ. ನೀಡಿತ್ತು. ಎಜೆಎಲ್​ನ ಷೇರುಗಳನ್ನು ಯಂಗ್ ಇಂಡಿಯಾಕ್ಕೆ ಹಂಚಿಕೆ ಮಾಡಲಾಗಿದ್ದು ಈ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲಾಗಿದೆ. ಸಾಲವನ್ನು ಎಜೆಎಲ್ ಲೆಕ್ಕ ಪುಸ್ತಕಗಳಿಂದ ತೆಗೆದು ಹಾಕಲಾಗಿದೆ ಎಂದು ಕಾಂಗ್ರೆಸ್ ವಿವರಿಸಿದೆ. ಆದರೆ, ಈ ವ್ಯವಹಾರಗಳು ಪಿಎಂಎಲ್​ಎ ಕಾನೂನಿನನ್ವಯ ಅಕ್ರಮ ಎಂಬುದು ಇಡಿ ವಾದವಾಗಿದೆ.

  ಹಲವು ಸುತ್ತು ವಿಚಾರಣೆ
  ಇಡಿ ಅಧಿಕಾರಿಗಳು 2022ರಲ್ಲಿ ಸೋನಿಯಾ ಗಾಂಧಿ ಅವರನ್ನು ಮೂರು ಸುತ್ತು (11 ಗಂಟೆ) ಹಾಗೂ ಅವರ ಪುತ್ರ, ಸಂಸದ ರಾಹುಲ್ ಗಾಂಧಿಯವರನ್ನು ಐದು ಸುತ್ತು (50 ಗಂಟೆ) ವಿಚಾರಣೆ ನಡೆಸಿದ್ದರು. ಹಿರಿಯ ಕಾಂಗ್ರೆಸ್ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪವನ್ ಬನ್ಸಾಲ್​ರನ್ನು ಕೂಡ ಇಡಿ ಪ್ರಶ್ನಿಸಿತ್ತು.

  ಬಿಜೆಪಿ ಜತೆ ಕೈಜೋಡಿಸಿದ ನಟ ಪವನ್​ ಕಲ್ಯಾಣ್; ಈ ಮೈತ್ರಿಗೆ ಕಾರಣವೇನು?

  ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಲೋಕಾಯುಕ್ತ ಎಂಟ್ರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts