More

    ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಲೋಕಾಯುಕ್ತ ಎಂಟ್ರಿ

    ಬೆಂಗಳೂರು: ಕಾಡುಗುಡಿ ಹೋಪ್ ಫಾರ್ಮ್ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ಬೆಸ್ಕಾಂ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟ ಸಂಬಂಧ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ವಿಚಾರಣೆ ಆರಂಭಿಸಿದ್ದಾರೆ.

    ವಿದ್ಯುತ್ ಮಾರ್ಗಗಳ ನಿರ್ವಹಣೆಯಲ್ಲಿನ ಲೋಪದಿಂದ ದುರ್ಘಟನೆ ಸಂಭವಿಸಿದ್ದು, ಮೇಲ್ನೋಟಕ್ಕೆ ಸಾಕ್ಷ್ಯಗಳು ಕಂಡು ಬರುತ್ತಿವೆ. ಇದನ್ನು ದುರಾಡಳಿತ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ. ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಲಾಗಿದೆ. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯ ಬೆಸ್ಕಾಂ ಮುಖ್ಯ ಇಂಜಿನಿಯರ್, ಪೂರ್ವ ವೃತ್ತದ ಸೂಪರಿಟೆಂಡಿಂಗ್ ಇಂಜಿನಿಯರ್, ವೈಟ್‌ಫೀಲ್ಡ್ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್, ಇ-4 ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ದುರ್ಘಟನೆ ಸಂಭವಿಸಿದ ಸ್ಥಳ ವ್ಯಾಪ್ತಿಯ ಸಹಾಯಕ ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಆರಂಭಿಸಲಾಗಿದೆ.

    ಬೆಸ್ಕಾಂ ಸ್ಥಳೀಯ ಕಚೇರಿಯಿಂದ 100 ಮೀಟರ್ ದೂರದಲ್ಲೇ ದುರ್ಘಟನೆ ಸಂಭವಿಸಿದೆ. ರಾತ್ರಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದೇ ಮಾರ್ಗದಲ್ಲಿ ವಿದ್ಯುತ್ ಹರಿಸಿದ್ದರಿಂದ ಇಬ್ಬರ ಸಾವು ಸಂಭವಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ನಿಯಮಿತವಾಗಿ ವಿದ್ಯುತ್ ಮಾರ್ಗಗಳನ್ನು ಪರಿಶೀಲಿಸುವುದು ಮತ್ತು ತುಕ್ಕು ಹಿಡಿದ, ತುಂಡಾಗುವ ಸ್ಥಿತಿಯಲ್ಲಿರುವ ತಂತಿಗಳನ್ನು ಬದಲಾಯಿಸುವುದು ಬೆಸ್ಕಾಂ ಅಧಿಕಾರಿಗಳ ಜವಾಬ್ದಾರಿ. ಆದರೆ, ಆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಪಾದಚಾರಿ ಮಾರ್ಗಗಳಲ್ಲೂ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದನ್ನು ಕಾಣಬಹುದು. ಇವೆಲ್ಲವೂ ದುರಾಡಳಿತ ಮತ್ತು ಕರ್ತವ್ಯಲೋಪಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಮುಂದಿನ ವಿಚಾರಣೆ ಡಿ.8ಕ್ಕೆ ನಿಗದಿಯಾಗಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಲೋಕಾಯುಕ್ತ ನ್ಯಾಯಾಮೂರ್ತಿ ಗಡುವು ನೀಡಿದ್ದಾರೆ.

    ಪೊಲೀಸ್ ತನಿಖೆಗೂ ಆದೇಶ

    ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗು ಸಾವಾಗಿದ್ದು, ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ವಿಭಾಗ ಬೆಂಗಳೂರು ನಗರ ಘಟಕದ ಎಸ್‌ಪಿಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts