ಒಂದಲ್ಲ, ಎರಡಲ್ಲ.. ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಮಹಿಳೆ

baby
Published on

ಕೇಪ್‍ಟೌನ್: ಅವಳಿ ಜವಳಿ ಮಕ್ಕಳು, ತ್ರಿವಳಿ ಮಕ್ಕಳಾಗುವುದನ್ನು ಕೇಳಿರುತ್ತೀರಿ. ಆದರೆ ಈ ಮಹಿಳೆ ವಿಶೇಷದಲ್ಲಿ ವಿಶೇಷ. ಈಕೆ ಜನ್ಮ ಕೊಟ್ಟಿರುವುದು ಒಂದಲ್ಲ, ಎರಡಲ್ಲ.. ಬರೋಬ್ಬರಿ 10 ಮಕ್ಕಳಿಗೆ.

ಹೌದು! ದಕ್ಷಿಣ ಆಫ್ರಿಕಾದ ಗೋಸಿಯಮ್ ತಮಾರಾ ಸಿಥೋಲ್​(37) ಹೆಸರಿನ ಮಹಿಳೆ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆಯ ಗರ್ಭದಿಂದ ಏಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳನ್ನು ಸಿಜರಿಯನ್ ಆಪರೇಷನ್ ಮಾಡಿ ತೆಗೆಯಲಾಗಿದೆ. ಮೊದಲೇ ಅವಳಿ ಮಕ್ಕಳನ್ನು ಹೊಂದಿದ್ದ ಮಹಿಳೆ ಇದೀಗ 12 ಮಕ್ಕಳ ತಾಯಿಯಾಗಿದ್ದಾಳೆ.

ಸಿಥೋಲ್​​ಗೆ 10 ಮಕ್ಕಳಾಗಿರುವ ಬಗ್ಗೆ ಆಕೆಯ ಪತಿ ಟೆಬೋಗೊ ತ್ಸೊಟೆಟ್ಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ಆಕೆ ಮೊದಲನೇ ಬಾರಿ ಮಕ್ಕಳಿಗೆ ಜನ್ಮ ನೀಡಿದಾಗ ಸ್ವೀಕರಿಸಿದ ಚಿಕಿತ್ಸೆಯಿಂದಾಗಿ ಈ ರೀತಿ 10 ಮಕ್ಕಳು ಹುಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಈ ಹಿಂದೆ ಮೊರೊಕ್ಕೊದ ಆಸ್ಪತ್ರೆಯೊಂದರಲ್ಲಿ ಹಲೀಮಾ ಸಿಸ್ಸೆ ಹೆಸರಿನ ಮಹಿಳೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ್ದಳು. ಇದುವರೆಗೆ ಅತಿ ಹೆಚ್ಚು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ ಮಹಿಳೆಯರ ಪಟ್ಟಿಯಲ್ಲಿ ಆಕೆ ಅಗ್ರಸ್ಥಾನದಲ್ಲಿದ್ದಳು. ಇದೀಗ ಗೋಸಿಯಮ್ ತಮಾರಾ ಸಿಥೋಲ್ ಆ ದಾಖಲೆಯನ್ನು ಮುರಿದಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net