ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಅವರ ಉದ್ಯಮಿ ಪತಿ ಆನಂದ್ ಅಹುಜಾ ಶೀಘ್ರದಲ್ಲೇ ಲಂಡನ್‌ನಲ್ಲಿರುವ ಐಷಾರಾಮಿ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್ ಮತ್ತು ಇತರ ಮಾಧ್ಯಮ ವರದಿಗಳ ಪ್ರಕಾರ, ಸೋನಂ ಕಪೂರ್ ಅವರ ಮಾವ ಹರೀಶ್ ಅಹುಜಾ ಅವರು ಇತ್ತೀಚೆಗೆ ಲಂಡನ್‌ನ ನಾಟಿಂಗ್ ಹಿಲ್‌ನಲ್ಲಿ ಬರೋಬ್ಬರಿ 231.47 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಇದು ಯುನೈಟೆಡ್ ಕಿಂಗ್ಡಮ್ನಲ್ಲಿ ಅತಿದೊಡ್ಡ ವಸತಿ ವ್ಯವಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಹರೀಶ್ ಅಹುಜಾ ಅವರು ಎಂಟು ಅಂತಸ್ತಿನ ವಸತಿ ಕಟ್ಟಡವನ್ನು ಖರೀದಿ ಮಾಡಿದ್ದು, ಅಹುಜಾ ಅವರ ಮಗ ಆನಂದ್ ಮತ್ತು ಸೊಸೆ ಸೋನಂ ಕಟ್ಟಡದ ಒಂದು ಭಾಗವನ್ನು ತಮ್ಮ ಖಾಸಗಿ ನಿವಾಸವಾಗಿ ಬಳಸಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಐಷಾರಾಮಿ ಕಟ್ಟಡದ ಇನ್ನುಳಿದ ಭಾಗವನ್ನು ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸಲಾಗುವುದು ಎಂದು ವರದಿ ತಿಳಿಸಿದೆ.
ಹೊಸದಾಗಿ ಖರೀದಿ ಮಾಡಿರುವ ಐಷಾರಾಮಿ ಮನೆ ಕೆನ್ಸಿಂಗ್ಟನ್ ಗಾರ್ಡನ್ಸ್‌ಗೆ ಸಮೀಪದಲ್ಲಿದೆ. ಸುಮಾರು 20,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ಇದನ್ನು ಕಳೆದ ಜುಲೈ ತಿಂಗಳಲ್ಲಿ ಖರೀದಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.
ಯಾರು ಈ ಹರೀಶ್ ಅಹುಜಾ?
ಅಂದಹಾಗೆ ಹರೀಶ್ ಅಹುಜಾ ಅವರು ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು ಭಾರತದ ಅತಿದೊಡ್ಡ ಉಡುಪು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ಇದು H&M, Uniqlo ಮತ್ತು Decathlon ನಂತಹ ಹೆಸರಾಂತ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಪೂರೈಸುತ್ತದೆ. ಮನಿ ಕಂಟ್ರೋಲ್, ಡಿಎನ್‌ಎ ಮತ್ತು ಇತರ ವರದಿಗಳ ಪ್ರಕಾರ, ಈ ಉಡುಪು ಕಂಪನಿಯು 50ಕ್ಕೂ ಹೆಚ್ಚು ಕಾರ್ಖಾನೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ.
ಹರೀಶ್ ಅಹುಜಾ ನಿವ್ವಳ ಮೌಲ್ಯ ಎಷ್ಟು?
2022ರ ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಹರೀಶ್ ಅಹುಜಾ ಅವರು 5,900 ಕೋಟಿ ರೂಪಾಯಿಗಳ ಅಂದಾಜು ನಿವ್ವಳ ಮೌಲ್ಯದೊಂದಿಗೆ ಉಡುಪು ತಯಾರಿಕಾ ಕ್ಷೇತ್ರದಲ್ಲೇ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಹೊಸದಾಗಿ ಖರೀದಿ ಮಾಡಿದ ಲಂಡನ್ ಮನೆ ಹೊರತಾಗಿ ಹರೀಶ್ ಅಹುಜಾ ಅವರು ದೆಹಲಿಯಲ್ಲಿ 173 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನೂ ಹೊಂದಿದ್ದಾರೆ. ಈ ಮನೆ 3170 ಚದರ ಗಜಗಳಷ್ಟು ಹರಡಿದೆ. ಈ ಬಂಗಲೆಯು ಪೃಥ್ವಿರಾಜ್ ರಸ್ತೆಯಲ್ಲಿದೆ. ಅಹುಜಾ ಅವರ ಮಗ ಆನಂದ್ ಅಹುಜಾ ಮತ್ತು ಸೊಸೆ ಸೋನಂ ಕಪೂರ್ ಮುಂಬೈ ಮತ್ತು ಲಂಡನ್‌ನಲ್ಲಿ ದುಬಾರಿ ಆಸ್ತಿ ಹೊಂದಿದ್ದಾರೆ. (ಏಜೆನ್ಸೀಸ್)
ನಾವು ಸೋತರೆ ಅವರು ತುಂಬಾ ಖುಷಿಪಡುತ್ತಾರೆ! ರೋಹಿತ್ ಶರ್ಮ ಶಾಕಿಂಗ್ ಹೇಳಿಕೆ
ತಾಯಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವ ಗುರಿ: ಗೂಗಲ್ನಲ್ಲಿ ಕೆಲ್ಸ ಗಿಟ್ಟಿಸಿದ ಯುವಕನ ಸಂಬಳ ಕೇಳಿದ್ರೆ ಬೆರಗಾಗ್ತೀರಾ!