ನವದೆಹಲಿ: ಕೆಲವು ಯಶಸ್ಸಿನ ಕಥೆಗಳು ಅದ್ಭುತ ಮತ್ತು ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಬಿ.ಟೆಕ್ ಓದಿದ ನಂತರ ಉತ್ತಮ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗ ಪಡೆಯಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಆ ಕನಸೇನಾದರೂ ನನಸಾದರೆ ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಸದ್ಯ ಬಿಹಾರದ ಮೂಲದ ಅಭಿಷೇಕ್ ಕುಮಾರ್ ಅವರ ಯಶೋಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗೂಗಲ್ನಲ್ಲಿ ಕೆಲಸ ಗಿಟ್ಟಿಸಬೇಕೆಂಬುದು ಪ್ರತಿಯೊಬ್ಬರ ಕನಸು. ಆದರೆ, ಅದು ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಕೆಲಸ ಪಡೆಯಲು ವಿಶೇಷ ಪ್ರತಿಭೆ ಇರಬೇಕು. ಅಂತಹ ವಿಶೇಷ ಪ್ರತಿಭೆ ಅಭಿಷೇಕ್ ಕುಮಾರ್. ಪಟನಾದ ಎನ್ಐಟಿಯಲ್ಲಿ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮುಗಿಸಿರುವ ಅಭಿಷೇಕ್, ಗೂಗಲ್ನಲ್ಲಿ ಭಾರಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ತಮ್ಮ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ.
ಅಭಿಷೇಕ್ ಮತ್ತು ಅವರ ಕುಟುಂಬ ಬಿಹಾರದ ಜಮುಯಿ ಜಿಲ್ಲೆಯ ಜಮುಕಾರಿಯಾ ಗ್ರಾಮದಲ್ಲಿ ವಾಸಿಸುತ್ತಿದೆ. ತಂದೆ ಇಂದ್ರದೇವ್ ಯಾದವ್ ಅವರು ಜಮುಯಿ ಸಿವಿಲ್ ನ್ಯಾಯಾಲಯದಲ್ಲಿ ವಕೀಲರಾಗಿದ್ದು, ತಾಯಿ ಮಂಜು ದೇವಿ ಗೃಹಿಣಿ. ಇಬ್ಬರು ಸಹೋದರರಲ್ಲಿ ಅಭಿಷೇಕ್ ಕಿರಿಯ. ತಾಯಿಯ ಆರೋಗ್ಯ ಸಮಸ್ಯೆಗಳ ನಡುವೆಯೂ ಅಭಿಷೇಕ್ ಶಿಕ್ಷಣಕ್ಕೆ ಆದ್ಯತೆ ನೀಡಿದರು.
ಅಭಿಷೇಕ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಜಮುಯಿಯಲ್ಲಿ ಪೂರ್ಣಗೊಳಿಸಿದರು ಮತ್ತು ಎನ್ಐಟಿ ಪಟನಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. 2022ರಲ್ಲಿ ಅಮೆಜಾನ್‌ನಲ್ಲಿ ಮೊದಲು ಕೆಲಸ ಸಿಕ್ಕಿತು. ಅಮೇಜಾನ್ನಲ್ಲಿ 1.08 ಕೋಟಿ ರೂ. ಸಂಬಳ ಪಡೆಯುತ್ತಿದ್ದರು. ಇದೀಗ ಟೆಕ್ ದೈತ್ಯ ಗೂಗಲ್ನಲ್ಲಿ ಕೆಲಸ ಗಿಟ್ಟಿಸಿರುವ ಅಭಿಷೇಕ್ಗೆ ವಾರ್ಷಿಕವಾಗಿ 2.75 ಕೋಟಿ ರೂ. ಸಂಬಂಳ ಸಿಗಲಿದೆ.
ಮಣ್ಣಿನ ಮನೆಗಳಿರುವ ಪುಟ್ಟ ಹಳ್ಳಿಯಲ್ಲಿ ನಾನು ಹುಟ್ಟಿ ಬೆಳೆದೆ. ಬಾಲ್ಯದಿಂದಲೂ ಅಮ್ಮನ ಅನಾರೋಗ್ಯವನ್ನೇ ನೋಡಿಕೊಂಡು ಬೆಳೆದೆ. ತಂದೆಯ ಆದಾಯ ತುಂಬಾ ಕಡಿಮೆ ಇತ್ತು. ಹೇಗಾದರೂ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಗಿಟ್ಟಿಸಿ ಅಮ್ಮನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಬೇಕೆಂಬುದು ನನ್ನ ಗುರಿಯಾಗಿತ್ತು. ಅದಕ್ಕಾಗಿ ನಾನು ಕಷ್ಟಪಟ್ಟೆ ಎಂದು ಅಭಿಷೇಕ್ ಹೇಳಿದರು.
ಸವಾಲುಗಳನ್ನೇ ಅವಕಾಶವನ್ನಾಗಿ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿದ ಅಭಿಷೇಕ್ ಹೊಸ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ಯುವಕ ತನ್ನ ಹಿಂದಿನ ಕೆಲಸದಿಂದ ಬಂದ ಆದಾಯದಲ್ಲಿ ತನ್ನ ತಂದೆ ಮತ್ತು ತಾಯಿಗಾಗಿ ಹೊಸ ಮನೆಯನ್ನು ನಿರ್ಮಿಸುತ್ತಿದ್ದಾನೆ. (ಏಜೆನ್ಸೀಸ್)
ನೀವು ಹೇಳಿದ ಎಲ್ಲ ಷರತ್ತುಗಳಿಗೂ ನಾನು ಒಪ್ಪುತ್ತೇನೆ! ವಧುವಿಗೆ ಚೆಕ್ಮೇಟ್ ಇಟ್ಟ ವರನ ಸ್ನೇಹಿತರು
ಬರೋಬ್ಬರಿ 1.87 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ! ಯಾರಪ್ಪ ಖರೀದಿಸಿದ ಪುಣ್ಯಾತ್ಮ?