

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ನಲ್ಲಿ ನೆಪೋಟಿಸಂ ಬಿರುಗಾಳಿ ಅಲೆ ಜೋರಾಗಿತ್ತು. ಸ್ಟಾರ್ ಮಕ್ಕಳಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗುತ್ತಿತ್ತು. ಅದೇ ರೀತಿ ಆ ಟ್ರೋಲ್ಗಳಿಗೆ ನಟಿ ಸೋನಾಕ್ಷಿ ಸಿನ್ಹಾ ಸಹ ಗುರಿಯಾಗಿದ್ದರು. ಇದೀಗ ಅದೆಲ್ಲವನ್ನು ಎದುರಿಸಿ ಮತ್ತೆ ಸಹಜ ಸಿನಿಮಾ ಜೀವನಕ್ಕೆ ಆಗಮಿಸುತ್ತಿದ್ದಾರೆ.
ಹೌದು, ಸುದೀರ್ಘ ಎಂಟು ತಿಂಗಳು ಸಿನಿಮಾದಿಂದ ದೂರವೇ ಉಳಿದಿದ್ದ ನಟಿ ಸೋನಾಕ್ಷಿ, ಇದೀಗ ವೆಬ್ಸಿರೀಸ್ವೊಂದರ ಚಿತ್ರೀಕರಣಕ್ಕೆ ಹಾಜರಿ ಹಾಕಲಿದ್ದಾರೆ. ರೀಮಾ ಕಾಗ್ತಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಫಾಲನ್ ವೆಬ್ಸಿರೀಸ್ನಲ್ಲಿ ಸೋನಾಕ್ಷಿ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತಾದರೂ, ಶೂಟಿಂಗ್ ಯಾವಾಗಿಂದ ಎಂಬ ಮಾಹಿತಿ ಲಭ್ಯವಿರಲಿಲ್ಲ. ಇದೀಗ ಡಿಸೆಂಬರ್ನಲ್ಲಿ ಸರಣಿಯ ಚಿತ್ರೀಕರಣ ಆಗಲಿದೆ.
ಗಲ್ಲಿ ಬಾಯ್ ಖ್ಯಾತಿಯ ವಿಜಯ ವರ್ಮಾ, ಗುಲ್ಶನ್ ದೇವಯ್ಯ, ಸೋಹಮ್ ಶಾ ಸೇರಿ ಹಲವು ಕಲಾವಿದರು ಈ ವೆಬ್ಸಿರೀಸ್ನಲ್ಲಿ ಇರಲಿದ್ದಾರೆ. 35 ಕಲಾವಿದರನ್ನು ರಾಜಸ್ತಾನಕ್ಕೆ ಕರೆದೊಯ್ದು ಒಂದೇ ಶೆಡ್ಯೂಲ್ನಲ್ಲಿ ಚಿತ್ರೀಕರಣ ಮುಗಿಸಿಕೊಳ್ಳುವುದು ನಿರ್ದೇಶಕಿ ರೀಮಾ ಪ್ಲಾನ್. ಇನ್ನು ದಬಾಂಗ್ 3 ಸಿನಿಮಾದ ಬಳಿಕ ಸೋನಾಕ್ಷಿ ಬೇರಾವ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನೇನು ಅಜಯ್ ದೇವಗನ್ ಜತೆಗ್ ಭುಜ್ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್)