

ಬೆಂಗಳೂರು: ಕನ್ನಡತಿ, ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಕನ್ನಡದ ಜತೆಗೆ ಪಕ್ಕದ ತೆಲುಗು, ತಮಿಳಿನಲ್ಲಿ ಹೆಚ್ಚು ಸಕ್ರಿಯರು. ಮಲಯಾಳಂ ಚಿತ್ರದ ಮೂಲಕವೇ ಅವರು ಚಿತ್ರರಂಗಕ್ಕೆ ಬಂದರಾದರೂ, ಇತ್ತೀಚಿನ ಕೆಲ ವರ್ಷಗಳಲ್ಲಿ ಅವರು ಯಾವುದೇ ಮಲಯಾಳಂ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಶ್ರದ್ಧಾ.
ಈಗಾಗಲೇ ಮಲಯಾಳಂನಲ್ಲಿ ಹಲವು ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ಬಿ. ಉನ್ನಿಕೃಷ್ಣನ್ ಇದೀಗ ಮತ್ತೊಮ್ಮೆ ಮೋಹನ್ ಲಾಲ್ ಜತೆಗೆ ಕೈ ಜೋಡಿಸಿದ್ದಾರೆ. ಶೀರ್ಷಿಕೆ ಅಂತಿಮವಾಗದ ಈ ಚಿತ್ರ ಪೊಲಿಟಿಕಲ್ ಡ್ರಾಮಾ ಎಂದು ಹೇಳಲಾಗುತ್ತಿದೆ. ಶ್ರದ್ಧಾ ಶ್ರೀನಾಥ್ ಪಾತ್ರ ವಿಶೇಷವಾಗಿದ್ದು, ಈ ಚಿತ್ರದಲ್ಲಿ ಐಎಎಸ್ ಅಧಿಕಾರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. 2015ರಲ್ಲಿ ಮಲಯಾಳಂನ ‘ಕೊಹಿನೂರ್’ ಚಿತ್ರದ ಮೂಲಕ ಶ್ರದ್ಧಾ ಬಣ್ಣದ ಲೋಕಕ್ಕೆ ಆಗಮಿಸಿದ್ದರು. ಅದಾದ ಬಳಿಕ ಕನ್ನಡ, ತೆಲುಗು, ತಮಿಳಿನಲ್ಲಿಯೇ ಹೆಚ್ಚು ಗುರುತಿಸಿಕೊಂಡರು.
ಇದೀಗ ಐದು ವರ್ಷಗಳ ಬಳಿಕ ಮತ್ತೆ ಮಾಲಿವುಡ್ಗೆ ಮರಳಿದ್ದಾರೆ. ಕಥೆ ಕೇಳಿ ಇಷ್ಟಪಟ್ಟಿರುವ ಶ್ರದ್ಧಾ, ಚಿತ್ರದ ಸಲುವಾಗಿ ಸುದೀರ್ಘವಾದ ಡೇಟ್ಸ್ ನೀಡಿದ್ದಾರೆ. ಒಟ್ಟು 18 ಕೋಟಿ ಬಜೆಟ್ನಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.