ಅಪ್ಪನ ವಯಸ್ಸಿನ ನಟನ ಜತೆಗೆ ಸೋನಾಕ್ಷಿ ಸಿನ್ಹಾ ನಟನೆ? ಆ ಹೀರೋ ಯಾರು ಗೊತ್ತಾ?

Sonakshi Sinha
Published on

ಮುಂಬೈ: ಕೆಲವು ವರ್ಷಗಳ ಹಿಂದಿನ ಮಾತು. ರಜನಿಕಾಂತ್​ ಅಭಿನಯದ 'ಲಿಂಗ' ಚಿತ್ರದಲ್ಲಿ ಅವರ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ. ಆ ಕಾಲಕ್ಕೆ ಸೋಷಿಯಲ್​ ಮೀಡಿಯಾ ಇಷ್ಟೊಂದು ಸ್ಟ್ರಾಂಗ್​ ಅಲ್ಲದಿದ್ದರೂ, ಆಕೆಯ ತಂದೆಯ ವಯಸ್ಸಿನ ನಟನ ಜತೆಗೆ ನಟಿಸಿದ್ದಿಕ್ಕೆ ಸೋನಾಕ್ಷಿ ಸಾಕಷ್ಟು ಟ್ರೋಲ್​ಗೊಳಗಾಗಿದ್ದರು. ಆ ನಂತರ ತಮಗಿಂತ ವಯಸ್ಸಿನಲ್ಲಿ ದೊಡ್ಡ ಅಂತರ ಇರುವ ನಟರ ಜತೆಗೆ ಅವರು ನಟನೆ ಮಾಡಿರಲಿಲ್ಲ.

ಈಗ ಅವರು ತಮ್ಮ ತಂದೆಯ ವಯಸ್ಸಿನ ಇನ್ನೊಬ್ಬ ನಟರ ಜತೆಗೆ ಸೋನಾಕ್ಷಿ ತೆರೆ ಹಂಚಿಕೊಳ್ಳುವುದಕ್ಕೆ ಹೊರಟಿದ್ದಾರೆ. ಆ ನಟ ಯಾರು ಗೊತ್ತಾ? ನಂದಮೂರಿ ಬಾಲಕೃಷ್ಣ. 'ವೀರ ಸಿಂಹ ರೆಡ್ಡಿ' ಎಂಬ ಚಿತ್ರವನ್ನು ಮುಗಿಸಿರುವ ನಂದಮೂರಿ ಬಾಲಕೃಷ್ಣ, ಅನಿಲ್​ ರಾವಿಪುಡಿ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ 'ಎನ್​ಬಿಕೆ 108​' ಎಂಬ ಹೆಸರಿಡಲಾಗಿರುವ ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸುವುದು ಬಹುತೇಕ ಪಕ್ಕಾ ಆಗಿದೆಯಂತೆ.

ಇದಕ್ಕೂ ಮೊದಲು, ನಾಯಕಿ ಪಾತ್ರಕ್ಕೆ ಸೋನಾಕ್ಷಿ ಅವರನ್ನು ಕೇಳಿದಾಗ, ಅವರು ನೋ ನೋ ಎಂದಿದ್ದಾರೆ. ಕೊನೆಗೆ ತ್ರಿಷಾ, ಹ್ಯೂಮಾ ಖುರೇಷಿ ಮುಂತಾದವರನ್ನೂ ನಾಯಕಿ ಪಾತ್ರಕ್ಕೆ ಕೇಳಲಾಗಿದೆ. ಎಲ್ಲರೂ ಬಾಲಯ್ಯ ಹೆಸರು ಕೇಳುತ್ತಿದ್ದಂತೆಯೇ ಮೀನಾ-ಮೇಷ ಎಣಿಸಿದ್ದಾರೆ. ಈ ಮಧ್ಯೆ ಏನಾಯಿತೋ ಗೊತ್ತಿಲ್ಲ. ಆ ಪಾತ್ರವನ್ನು ತಾವೇ ಮಾಡುವುದಾಗಿ ಸೋನಾಕ್ಷಿ ಹೇಳಿಕೊಂಡಿದ್ದಾರಂತೆ. ಆದರೆ, ಇನ್ನೂ ಅಗ್ರೀಮೆಂಟ್​ ಆಗದ ಕಾರಣ, ಅಧಿಕೃತ ಘೋಷಣೆ ಆಗಿಲ್ಲವಂತೆ.

ಈ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳಿಂದ ಪ್ರಾರಂಭವಾಗಲಿದ್ದು, ಅಂತಿಮವಾಗಿ ಸೋನಾಕ್ಷಿ ನಾಯಕಿಯಾಗುತ್ತಾರೋ ಅಥವಾ ಅವರ ಜಾಗಕ್ಕೆ ಬೇರೆ ಯಾರಾದರೂ ಬರುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net