

ಬೆಳ್ತಂಗಡಿ: ಕೊರಗಜ್ಜನ ಮಹಿಮೆ ಮತ್ತು ಕಾರ್ಣಿಕವನ್ನು ತೆರೆಯ ಮೇಲೆ ತರಬೇಕೆಂದು ಇತ್ತೀಚಿನ ವರ್ಷಗಳಲ್ಲಿ ಕೆಲವರು ಪ್ರಯತ್ನಿಸಿದ್ದರು. ಇದೀಗ ಸುಧೀರ್ ಅತ್ತಾವರ್, ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿ, ಒಂದು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಅದೇ 'ಕರಿ ಹೈದ ... ಕರಿ ಅಜ್ಜ'.
ಧ್ರುತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ನಡಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ, 'ಕರಿ ಹೈದ ... ಕರಿ ಅಜ್ಜ' ಚಿತ್ರದ ಮುಹೂರ್ತ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸ್ಥಳಿಯ ಶಾಸಕ ಶ್ರೀ ಹರೀಶ್ ಪೂಂಜ ಕ್ಯಾಮರ ಚಾಲನೆ ಮಾಡಿದರೆ, ನಿರ್ಮಾಪಕರ ತಾಯಿ ಕಮಲ ಕೆ ಸಪಲ್ಯ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು.
12ನೇ ಶತಮಾನದಲ್ಲಿದ್ದ ಕೊರಗಜ್ಜನ ನಿಜ ಬದುಕಿನ ಯಾರಿಗೂ ತಿಳಿದಿರದಂತಹ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಖ್ಯಾತ ಹಾಲಿವುಡ್ ಮತ್ತು ಬಾಲಿವುಡ್ ನಟ ಕಬೀರ್ ಬೇಡಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ. ಭರತ್ ಸೂರ್ಯ ಎನ್ನುವ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ.
'ಕರಿ ಹೈದ ... ಕರಿ ಅಜ್ಜ' ಚಿತ್ರಕ್ಕೆ ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಾಗ್ರಹಣ ಮಾಡುತ್ತಿದ್ದು, ಸುಧೀರ್ ಮತ್ತು ಕೃಷ್ಣ ರವಿ ಸಂಗೀತ ಸಂಯೋಜಿಸುತ್ತಿದ್ದಾರೆ.