ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮಾಲಾಶ್ರೀ ಮಗಳು ರಾಧಾನಾ ನಾಯಕಿ?

Radhana Ram
Published on

ಬೆಂಗಳೂರು: 'ಜೋಗಿ' ಪ್ರೇಮ್​ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸಲಿರುವ ಹೊಸ ಚಿತ್ರಕ್ಕೆ ಈಗಾಗಲೇ ಮುಹೂರ್ತವಾಗಿ, ಚಿತ್ರಕ್ಕೆ 'ಕೆಡಿ - ದಿ ಡೆವಿಲ್​' ಎಂಬ ಹೆಸರನ್ನೂ ಇಡಲಾಗಿದೆ. ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದ್ದು, ಈ ಚಿತ್ರಕ್ಕೆ ಮಾಲಾಶ್ರೀ ಮತ್ತು ರಾಮು ಅವರ ಮಗಳು ರಾಧನಾ ರಾಮ್​ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಹೌದು, 'ಕೆಡಿ - ದಿ ಡೆವಿಲ್​' ಚಿತ್ರಕ್ಕೆ ರಾಧನಾ ರಾಮ್​ ನಾಯಕಿಯಂತೆ. ಹಾಗಂತ ಗಾಂಧಿನಗರದಲ್ಲಿ ಗುಲ್ಲೋ ಗುಲ್ಲು. ಆದರೆ, ಈ ಬಗ್ಗೆ ಪ್ರೇಮ್​ ಆಗಲೀ, ಚಿತ್ರ ನಿರ್ಮಿಸುತ್ತಿರುವ ಕೆ.ವಿ.ಎನ್​. ಪ್ರೊಡಕ್ಷನ್ಸ್​ ಸಂಸ್ಥೆಯವರಾಗಲೀ ಅಥವಾ ಮಾಲಾಶ್ರೀ ಮಗಳಾಗಲೀ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ನಾಯಕಿಯ ಆಯ್ಕೆ ವಿಷಯ ಮಾತುಕತೆಯ ಹಂತದಲ್ಲಿರಬಹುದು. ಹಾಗಾಗಿ, ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಒಂದು ಪಕ್ಷ ಸುದ್ದಿ ನಿಜವಾದರೆ, ಇದು ರಾಧನಾ ಅಭಿನಯದ ಎರಡನೇ ಚಿತ್ರವಾಗಲಿದೆ. ಇದಕ್ಕೂ ಮುನ್ನ ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ಮತ್ತು ತರುಣ್​ ಸುಧೀರ್​ ನಿರ್ದೇಶನದ ಹೊಸ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾಗಿದೆ.

ಇದಕ್ಕೂ ಮೊದಲು ಈ ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಬಗ್ಗೆಯೂ ಅಧಿಕೃತ ಘೋಷಣೆಯಾಗಿರಲಿಲ್ಲ. ಈಗಿರುವ ಪ್ರಶ್ನೆಯೆಂದರೆ, ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ಅಂತಿಮವಾಗ ರಾಧನಾ ಆಯ್ಕೆಯಾಗುತ್ತಾರೋ ಅಥವಾ ಶ್ರೀಲೀಲಾ ಆಯ್ಕೆಯಾಗುತ್ತಾರೋ ಎಂದು. ಚಿತ್ರೀಕರಣ ಪ್ರಾರಂಭವಾದ ಮೇಲೆ ನಾಯಕಿಯ ವಿಷಯದಲ್ಲಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

'ಕೆಡಿ' ಚಿತ್ರದ ಚಿತ್ರೀಕರಣವೇ ಇನ್ನೂ ಶುರು ಆಗಿಲ್ಲ. ಆಗಲೇ ಚಿತ್ರದ ಎಲ್ಲಾ ಭಾಷೆಗಳ ವಿತರಣೆಯ ಹಕ್ಕುಗಳು ಮಾರಾಟವಾಗಿರುವುದು ವಿಶೇಷ. ಚಿತ್ರದ ಕನ್ನಡ ಅವತರಣಿಕೆಯ ವಿತರಣೆಯ ಜವಾಬ್ದಾರಿಯನ್ನು ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆಯೇ ವಹಿಸಿಕೊಳ್ಳಲಿದೆ. ಇನ್ನು, ತೆಲುಗು ಹಕ್ಕುಗಳನ್ನು ವಾರಾಹಿ ಚಲನಚಿತ್ರಂ ಸಂಸ್ಥೆಯು ಪಡೆದುಕೊಂಡಿದೆ. ತಮಿಳಿನ ಅವತರಣಿಕೆಯ ಹಕ್ಕುಗಳನ್ನು ಉದಯನಿಧಿ ಸ್ಟಾಲಿನ್​ ಅವರ ರೆಡ್​ ಜಯಂಟ್​ ಮೂವೀಸ್​ ಪಡೆದುಕೊಂಡರೆ, ಮಲಯಾಳಂ ಅವತರಣಿಕೆಯ ಹಕ್ಕುಗಳನ್ನು ಮೋಹನ್​ ಲಾಲ್​ ಅವರ ಆರ್ಶೀರ್ವಾದ್​ ಸಿನಿಮಾಸ್​ ಪಡೆದಿದೆ. ಇನ್ನು, ಹಿಂದಿಯ ಹಕ್ಕುಗಳನ್ನು ಎಎ ಫಿಲಂಸ್​ನ ಅನಿಲ್​ ಥಡಾನಿ ಪಡೆದಿದ್ದು, ಉತ್ತರ ಭಾರತದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

ಇನ್ನು, 'ಕೆಡಿ - ದಿ ಡೆವಿಲ್​' ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ಸ್​ನಡಿ ನಿಶಾ ವೆಂಕಟ್​ ಕೋನಾಂಕಿ ನಿರ್ಮಾಣ ಮಾಡುತ್ತಿದ್ದು, ವಿಲಿಯಂ ಡೇವಿಡ್​ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಸಂಗೀತವಿದೆ. ಧ್ರುವ ಜತೆಗೆ ಬಾಲಿವುಡ್​ ನಟ ಸಂಜಯ್​ ದತ್​ ಸಹ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸುದ್ದಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net