

ಬೆಂಗಳೂರು: ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತರವಾಗಿರುವ 'ವಿಜಯಾನಂದ' ಚಿತ್ರದ ಟ್ರೈಲರ್ಗೆ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಶನಿವಾರ ರಾತ್ರಿ ಬಿಡುಗಡೆಯಾದ ಈ ಟ್ರೈಲರ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸೌಂಡ್ ಮಾಡುತ್ತಿರುವುದರ ಜತೆಗೆ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಲಕ್ಷಲಕ್ಷ ವೀಕ್ಷಣೆ ಕಂಡಿದೆ.
ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ 'ವಿಜಯಾನಂದ' ಚಿತ್ರದ ಟ್ರೈಲರ್ ಬಿಡುಗಡೆ ಶನಿವಾರ ರಾತ್ರಿ ಒರಾಯನ್ ಮಾಲ್ನ ಪಿವಿಆರ್ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಮುಗಿದಿದೆ. ದೇಶಾದ್ಯಂತ ಬಂದ ಸಿನಿಮಾ ಪತ್ರಕರ್ತರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮುಂತಾದ ಗಣ್ಯರು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
'ವಿಜಯಾನಂದ' ಚಿತ್ರದ ಟ್ರೈಲರ್ ಒಟ್ಟು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಈ ಪೈಕಿ ಕನ್ನಡ 8.5 ಲಕ್ಷ, ಹಿಂದಿ 4 ಲಕ್ಷ, ತೆಲುಗು 3.62 ಲಕ್ಷ, ಮಲಯಾಳಂ 2.33 ಮತ್ತು ತಮಿಳು ಭಾಷೆಯ ಟ್ರೈಲರ್ 4 ಲಕ್ಷ ವೀಕ್ಷಣೆಯನ್ನು ಕಂಡಿದೆ. ಅಷ್ಟೇ ಅಲ್ಲ, ಸಾವಿರಾರು ಲೈಕ್ಗಳನ್ನು ಪಡೆಯುವುದರ ಜತೆಗೆ, ಪ್ರೇಕ್ಷಕರು ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ, 'ವಿಜಯಾನಂದ' ಚಿತ್ರವು ಡಿ. 9ರಂದು ಭಾರತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜತೆಗೆ, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲೂ ಬಿಡುಗಡೆಯಾಗುತ್ತಿದೆ.
'ವಿಜಯಾನಂದ' ಚಿತ್ರದಲ್ಲಿ ಡಾ. ವಿಜಯ ಸಂಕೇಧ್ವರ ಅವರ ಪಾತ್ರವನ್ನು ನಿಹಾಲ್ ರಜಪೂತ್ ನಿರ್ವಹಿಸಿದ್ದು, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಭರತ್ ಬೋಪಣ್ಣ, ಸಿರಿ, ಅರ್ಚನಾ ಗೊಟ್ಟಿಗೆ, ಶೈನ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಆರ್ಎಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ. ಆನಂದ್ ಸಂಕೇಶ್ವರ ನಿರ್ಮಿಸಿರುರವ ಈ ಚಿತ್ರವನ್ನು ರಿಷಿಕಾ ಶರ್ಮ ನಿರ್ದೇಶನ ಮಾಡಿದ್ದು, ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದಾರೆ.