

ಮುಂಬೈ: ಹೃತಿಕ್ ರೋಶನ್, ಸಾಬಾ ಆಜಾದ್ ಎಂಬ ಯುವತಿಯ ಜತೆಗೆ ಹೆಚ್ಚುಹೆಚ್ಚು ಸುತ್ತುತ್ತಿದ್ದು, ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಬಹಳ ಕೇಳಿಬರುತ್ತಿವೆ. ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಹೃತಿಕ್ ಸದ್ಯದಲ್ಲೇ ತಮ್ಮ ಗೆಳತಿ ಜತೆಗೆ ಹೊಸ ಮನೆಗೆ ಶಿಫ್ಟ್ ಆಗಲಿದ್ದು, ಅಲ್ಲಿ ಅವರ ಜತೆಗೆ ವಾಸಿಸಲಿದ್ದಾರಂತೆ.
ಹೌದು, ಕೆಲವು ತಿಂಗಳುಗಳ ಹಿಂದೆ ಹೃತಿಕ್ ರೋಶನ್ ಬರೋಬ್ಬರಿ 67.50 ಕೋಟಿ ಖರ್ಚು ಮಾಡಿ ಜುಹು-ವರ್ಸೋವಾ ಲಿಂಕ್ ರೋಡ್ ಬಳಿ ಒಂದು ಡ್ಯೂಪ್ಲೇ ಮನೆಯನ್ನು ಖರೀದಿಸಿದ್ದರು. ಈ ಫ್ಲಾಟ್ಗಳು 15 ಮತ್ತು 16ನೇ ಮಹಡಿಯಲ್ಲಿವೆಯಂತೆ. ಈ ಡ್ಯೂಪ್ಲೇ ಮನೆಯ ರಿನೋವೇಷನ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಹೃತಿಕ್ ತಮ್ಮ ಗೆಳತಿ ಜತೆಗೆ ಅಲ್ಲಿಗೆ ಹೋಗಿ ಸೆಟಲ್ ಆಗುತ್ತಾರೆ ಎಂಬ ಸುದ್ದಿ ಇದೆ.
ಆದರೆ, ಈ ಸುದ್ದಿಯನ್ನು ಹೃತಿಕ್ ಅಲ್ಲಗೆಳೆದಿದ್ದಾರೆ. ಇದೊಂದು ಅಪ್ಪಟ ಸುಳ್ಳು ಸುದ್ದಿ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ.
'ಒಬ್ಬ ಪಬ್ಲಿಕ್ ಫಿಗರ್ ಆಗಿ ಜನ ನನ್ನನ್ನು ಕುತೂಹಲದಿಂದ ಗಮನಿಸುತ್ತಿರುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ, ಈ ರೀತಿ ಸುಳ್ಳುಸುದ್ದಿ ಹರಡುವುದು ತಪ್ಪು. ಅದರಲ್ಲೂ ಜವಾಬ್ದಾರಿ ಇರುವ ಮಾಧ್ಯಮದವರು ಈ ರೀತಿ ಸುಳ್ಳುಸುದ್ದಿ ಹರಡಬಾರದು' ಎಂದು ಬರೆದುಕೊಂಡಿದ್ದಾರೆ.