ಮರಳು ಮಾಫಿಯಾದಲ್ಲಿ ಹತ್ಯೆಗೀಡಾದ ಅಧಿಕಾರಿಯ ಪುತ್ರ ನ್ಯಾಯಾಂಗ ಸೇವೆ ಪರೀಕ್ಷೆಯಲ್ಲಿ ಪಾಸ್​! ಈಗ ಸಿವಿಲ್ ಜಡ್ಜ್​, ತಂದೆಯ ಕನಸು ನನಸು

Untitled design - 2024-02-20T080118.443
Published on

ತಮಿಳುನಾಡು: ಅಕ್ರಮ ಮರಳು ದಂಧೆ ನಿಲ್ಲಿಸಲು ಯತ್ನಿಸಿದಾಗ ಹತ್ಯೆಗೀಡಾದ ಗ್ರಾಮಾಡಳಿತ ಅಧಿಕಾರಿಯೊಬ್ಬರ ಪುತ್ರ ಇಂದು ನ್ಯಾಯಾಂಗ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿ ಹೊರಹೊಮ್ಮಿರುವುದು ಕುಟುಂಬಸ್ಥರಿಗೆ ಬಹಳ ಸಂತಸ ನೀಡಿದ್ದು, ಪಟ್ಟ ಶ್ರಮ, ನೋವುಗಳಿಗೆ ಸಿಕ್ಕ ಫಲ ಎಂದು ಖುಷಿಪಟ್ಟಿದ್ದಾರೆ.

ಏಪ್ರಿಲ್ 25, 2023ರಂದು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳ ದಂಧೆಯನ್ನು ನಿಲ್ಲಿಸಲು ಮುಂದಾಗಿದ್ದ ತಮ್ಮ ತಂದೆ ಲೌರ್ಡ್ ಫ್ರಾನ್ಸಿಸ್ ಅವರನ್ನು ಕಳೆದುಕೊಂಡ ಪುತ್ರ ಯೇಸುವಾದಿಯಾನ್, ಇದೀಗ ನ್ಯಾಯಾಂಗ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮುಖೇನ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಹತ್ತು ತಿಂಗಳ ನಂತರ ಯೇಸುವಾದಿಯಾನ್ ತಮಿಳುನಾಡು ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ. ಈ ಮೂಲಕ ತಮ್ಮ ತಂದೆಯ ಕನಸನ್ನು ನನಸಾಗಿಸಿದ್ದಾರೆ. “ನನ್ನಂತಹ ಯುವಕರು ಕಷ್ಟಪಟ್ಟು ಓದಬೇಕೆಂದು ನಾನು ಬಯಸುತ್ತೇನೆ. ಶಿಕ್ಷಣವು ನಮಗೆ ಜೀವನದಲ್ಲಿ ಉತ್ತಮ ಸ್ಥಾನವನ್ನು ನೀಡುತ್ತದೆ. ನನ್ನ ಕುಟುಂಬ ನನಗೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುತ್ತಿದೆ" ಎಂದು ಯೇಸುವಾದಿಯಾನ್ ತಮ್ಮ ಯಶಸ್ಸಿನ ಸಂದೇಶವನ್ನು ಸಾರಿದ್ದಾರೆ.

ಯೇಸುವಾದಿಯಾನ್ ಅವರು ಪುದುಕೊಟ್ಟೈನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಚೆನ್ನೈನಲ್ಲಿ ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅವರ ತಂದೆ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಮುರಪ್ಪನಾಡು ಗ್ರಾಮಾಡಳಿತ ಅಧಿಕಾರಿಯಾಗಿದ್ದರು. ಅಕ್ರಮ ಮರಳು ಮಾಫಿಯಾವನ್ನು ತಡೆಯಲು ಯತ್ನಿಸಿದಾಗ ದುಷ್ಕರ್ಮಿಗಳ ದಾಳಿಗೆ ಮೃತಪಟ್ಟರು ಎಂದು ವರದಿಯಾಗಿದೆ.

ಅಕ್ರಮ ಮರಳು ದಂಧೆ ವಿರುದ್ಧ ಹೋರಾಟ ನಡೆಸುತ್ತಿದ್ದ ಲೂರ್ಡ್ ಫ್ರಾನ್ಸಿಸ್ ಪ್ರಾಮಾಣಿಕ ಅಧಿಕಾರಿ ಎಂದು ಪರಿಗಣಿಸಲಾಗಿದ್ದು, ಈ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮೂವರು ಆರೋಪಿಗಳಾದ ರಾಮಸುಬ್ರಮಣ್ಯಂ, ರಾಮಸುಬ್ಬು ಮತ್ತು ಮರಿಮುತ್ತು ಹತ್ಯೆಗೈದ ಆರೋಪಿಗಳಾಗಿದ್ದು, ಸೆಪ್ಟೆಂಬರ್ 2023ರಲ್ಲಿ ತುತ್ತುಕುಡಿ ತತ್ವ ನ್ಯಾಯಾಲಯವು ಈ ಮೂವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net