

ಮುಂಬೈ: ಶನಿವಾರದಂದು ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಲಿಮಿಟೆಡ್ (Salasar Techno Engineering Ltd.) ಷೇರುಗಳು ಶೇಕಡಾ 19ರಷ್ಟು ಏರಿಕೆ ಕಂಡಿವೆ.
ಈ ಕಂಪನಿಯು 4 ಬೋನಸ್ ಷೇರು ನೀಡುವುದಾಗಿ ಘೋಷಿಸಿರುವುದೇ, ಷೇರು ಬೆಲೆಯಲ್ಲಿ ಒಂದೇ ದಿನದಲ್ಲಿ ಈ ಅದ್ಭುತ ಹೆಚ್ಚಳಕ್ಕೆ ಕಾರಣ.
ಶನಿವಾರ ಶೇ.19.42ರಷ್ಟು ಭಾರಿ ಏರಿಕೆಯೊಂದಿಗೆ ಈ ಕಂಪನಿಯ ಷೇರುಗಳು ರೂ.94.88ಕ್ಕೆ ತಲುಪಿದೆ. ಬೋನಸ್ ಷೇರುಗಳ ದಾಖಲೆ ದಿನಾಂಕದ ಘೋಷಣೆಯ ನಂತರ ಸಲಾಸರ್ ಟೆಕ್ನೋ ಷೇರುಗಳಲ್ಲಿ ಈ ಭಾರಿ ಏರಿಕೆ ಕಂಡುಬಂದಿದೆ. ಕಂಪನಿಯು ತನ್ನ ಹೂಡಿಕೆದಾರರಿಗೆ 4:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತಿದೆ. ಅಂದರೆ, ಕಂಪನಿಯು ಪ್ರತಿ ಷೇರಿಗೆ 4 ಬೋನಸ್ ಷೇರುಗಳನ್ನು ನೀಡುತ್ತದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಷೇರುಗಳು 5 ದಿನಗಳಲ್ಲಿ ಶೇಕಡಾ30 ಕ್ಕಿಂತ ಹೆಚ್ಚು ಜಿಗಿದಿವೆ.
ಸಲಾಸರ್ ಟೆಕ್ನೋ ಇಂಜಿನಿಯರಿಂಗ್ನ ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 1 ಫೆಬ್ರವರಿ 2024 ಎಂದು ನಿಗದಿಪಡಿಸಲಾಗಿದೆ. ಕಂಪನಿಯು ಈ ಹಿಂದೆ ಜುಲೈ 2021 ರಲ್ಲಿ 1:1 ಅನುಪಾತದಲ್ಲಿ
ಬೋನಸ್ ಷೇರು ನೀಡಿತ್ತು. ಅಂದರೆ, ಕಂಪನಿಯು ಪ್ರತಿ ಷೇರಿಗೆ 1 ಬೋನಸ್ ಷೇರನ್ನು ನೀಡಿತ್ತು. ಜೂನ್ 2022 ರಲ್ಲಿ ಸಲಾಸರ್ ಟೆಕ್ನೋ ಸ್ಟಾಕ್ ವಿಭಜನೆಯನ್ನು ಕೂಡ ಮಾಡಿದೆ. ಕಂಪನಿಯ ರೂ 10 ಮುಖ
ಬೆಲೆಯ ಷೇರನ್ನು ತಲಾ 1 ರೂ ಮುಖಬೆಲೆಯ 10 ಷೇರುಗಳಾಗಿ ವಿಂಗಡಿಸಲಾಗಿದೆ.
ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಲಿಮಿಟೆಡ್ ನೋಯ್ಡಾ ಮೂಲದ ಕಂಪನಿಯಾಗಿದೆ. ಇದನ್ನು 2006 ರಲ್ಲಿ ಸ್ಥಾಪಿಸಲಾಗಿದೆ. ದೊಡ್ಡ ಮತ್ತು ಭಾರವಾದ ಉಕ್ಕಿನ ರಚನೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಕಂಪನಿಯು ಕಸ್ಟಮೈಸ್ ಮಾಡಿದ ಉಕ್ಕಿನ ರಚನೆಗಳು ಮತ್ತು 360-ಡಿಗ್ರಿ EPC ಪರಿಹಾರಗಳನ್ನು ಟೆಲಿಕಾಂ, ಪವರ್, ರೈಲ್ವೇಸ್ ಸೇರಿದಂತೆ ವಿವಿಧ ಶ್ರೇಣಿಯ ಕೈಗಾರಿಕೆಗಳಿಗೆ ಒದಗಿಸುತ್ತದೆ.
ಈ ಸ್ಮಾಲ್ ಕ್ಯಾಪ್ ಕಂಪನಿಯ ಷೇರುಗಳು 4 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 2417% ರಷ್ಟು ಏರಿಕೆಯಾಗಿದೆ. ಕಂಪನಿಯ ಷೇರುಗಳು ಏಪ್ರಿಲ್ 17, 2020 ರಂದು 3.78 ರೂಪಾಯಿ ಇದ್ದುದು ಜನವರಿ 20, 2024 ರಂದು 94 ರೂಪಾಯಿಗೆ ತಲುಪಿವೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಷೇರುಗಳು ಕಳೆದ 3 ವರ್ಷಗಳಲ್ಲಿ 581% ಏರಿಕೆಯಾಗಿವೆ.