Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು. ಉತ್ತಮ ನಿದ್ರೆಯು ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಅಲ್ಲದೆ, ನಿಮ್ಮ ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ. ಇದರಿಂದ ನೀವು ಉತ್ತಮ ಭಾವನೆಯವನ್ನು ಹೊಂದುವಿರಿ. ಒಂದು ವೇಳೆ ಸಮರ್ಪಕ ನಿದ್ರೆಯಾಗದಿದ್ದಲ್ಲಿ ಅದರ ಪರಿಣಾಮ ದಿನವಿಡೀ ಇರುತ್ತದೆ. ಯಾವ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ ಮತ್ತು ದೇಹ ದಣಿದಿರುವಂತೆ ಭಾಸವಾಗುತ್ತದೆ.
ನಿದ್ರೆಯ ಸಮಯದಲ್ಲಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಹಾರ್ಮೋನುಗಳು ಜೀವಕೋಶಗಳನ್ನು ಸರಿಪಡಿಸುವ ಮೂಲಕ ದೇಹದ ಶಕ್ತಿಯ ಬಳಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ, ಕೆಲವು ಜನರು ತಮ್ಮ ಬಿಡುವಿಲ್ಲದ ಜೀವನಶೈಲಿ ಅಥವಾ ಅಭ್ಯಾಸಗಳಿಂದ ಸಾಕಷ್ಟು ನಿದ್ರೆಯನ್ನು ಪಡೆಯದಿದ್ದರೆ, ಅಂಥವರು ಕಾಲ ಕ್ರಮೇಣ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಖಿನ್ನತೆ, ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ತಜ್ಞರ ಪ್ರಕಾರ, ರಾತ್ರಿಯಲ್ಲಿ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸರಿಯಾಗಿ ನಿದ್ದೆ ಮಾಡದೇ ಇರುವುದುರಿಂದ ಎದುರಾಗುವ ಆರೋಗ್ಯದ ಅಪಾಯಗಳನ್ನು ತಿಳಿದ ನಂತರ, ನಿದ್ರೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಾಗಾದರೆ ಎಷ್ಟು ಗಂಟೆ ನಿದ್ರೆ ಮಾಡಬೇಕೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ, ನಿದ್ರೆಯ ಅವಧಿ ಆಯಾ ವಯಸ್ಸಿಗೆ ಅನುಗುಣವಾಗಿರುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಅಧ್ಯಯನದ ಪ್ರಕಾರ ವಯಸ್ಸಿನ ಆಧಾರದ ಮೇಲೆ ನಿದ್ರೆ ಅವಧಿ ಅವಲಂಬಿತವಾಗಿರುತ್ತದೆ. ಈ ಕುರಿತಾದ ಉಪಯುಕ್ತ ಮಾಹಿತಿ ಇಲ್ಲಿದೆ.
* 0 ಯಿಂದ 3 ತಿಂಗಳವರೆಗೆ: ನಿದ್ರೆಯ ಸಮಯ 14 ರಿಂದ 17 ಗಂಟೆಗಳಿರಬೇಕು. 9 ಗಂಟೆಗಳಿಗಿಂತ ಕಡಿಮೆಯಾಗಬಾರದು ಮತ್ತು 19 ಗಂಟೆಗಳಿಗಿಂತ ಹೆಚ್ಚಾಗಬಾರದು.
* 4 ರಿಂದ 11 ತಿಂಗಳವರೆಗೆ: 12 ರಿಂದ 15 ಗಂಟೆಗಳ ನಿದ್ರೆ ಅವಶ್ಯಕ. 10 ಗಂಟೆಗಳಿಗಿಂತ ಕಡಿಮೆ ಅಥವಾ 18 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು.
* 1 ರಿಂದ 2 ವರ್ಷ: 11 ರಿಂದ 14 ಗಂಟೆಗಳ ನಿದ್ರೆ ಮುಖ್ಯ. 9 ಗಂಟೆಗಳಿಗಿಂತ ಕಡಿಮೆ ಅಥವಾ 16 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು.
* 3 ರಿಂದ 5 ವರ್ಷಗಳು: ಈ ವಯಸ್ಸಿನವರಿಗೆ 10 ರಿಂದ 13 ಗಂಟೆಗಳ ನಿದ್ರೆ ಕಡ್ಡಾಯವಾಗಿದೆ. 8 ಗಂಟೆಗಳಿಗಿಂತ ಕಡಿಮೆ ಅಥವಾ 14 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವಂತಿಲ್ಲ.
* 6 ರಿಂದ 13 ವರ್ಷಗಳು: ನಿದ್ರೆಯ ಸಮಯ 9 ರಿಂದ 11 ಗಂಟೆಗಳಿರಬೇಕು. 7 ಗಂಟೆಗಳಿಗಿಂತ ಕಡಿಮೆ ಅಥವಾ 12 ಗಂಟೆಗಳಿಗಿಂತ ಹೆಚ್ಚಿರಬಾರದು.
* 14 ರಿಂದ 17 ವರ್ಷಗಳು: 8 ರಿಂದ 10 ಗಂಟೆಗಳ ನಿದ್ರೆ ಅತ್ಯವಶ್ಯಕ. 7 ಗಂಟೆಗಳಿಗಿಂತ ಕಡಿಮೆ ಅಥವಾ 11 ಗಂಟೆಗಳಿಗಿಂತ ಹೆಚ್ಚಿರಬಾರದು.
* 18 ರಿಂದ 25 ವರ್ಷಗಳು: ಈ ವಯಸ್ಸಿನವರಿಗೆ 7 ರಿಂದ 9 ಗಂಟೆಗಳ ನಿದ್ರೆ ಅವಶ್ಯಕ. 6 ಗಂಟೆಗಳಿಗಿಂತ ಕಡಿಮೆ ಅಥವಾ 11 ಗಂಟೆಗಳಿಗಿಂತ ಹೆಚ್ಚಿನ ಸಮಯ ಮಲಗಬಾರದು.
* 26 ರಿಂದ 64 ವರ್ಷಗಳು: ಈ ವಯಸ್ಸಿನವರಿಗೆ 7 ರಿಂದ 9 ಗಂಟೆಗಳ ನಿದ್ರೆ ಬೇಕೇ ಬೇಕು. 6 ಗಂಟೆಗಳಿಗಿಂತ ಕಡಿಮೆ ಅಥವಾ 10 ಗಂಟೆಗಳಿಗಿಂತ ಹೆಚ್ಚು ನಿದ್ರಿಸಬಾರದು.
* 65 ವರ್ಷ ಮತ್ತು ಮೇಲ್ಪಟ್ಟವರು: ಈ ವಯೋಮಾನದವರಿಗೆ 7 ರಿಂದ 8 ಗಂಟೆಗಳು ನಿದ್ರೆ ಅತ್ಯವಶ್ಯಕ. 5 ಗಂಟೆಗಳಿಗಿಂತ ಕಡಿಮೆ ಮತ್ತು 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.
ನೋ ಜಿಮ್, ನೋ ಡಯಟ್… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss
ಈ ಆಹಾರಗಳನ್ನು ಸೇವಿಸಿದ ಬಳಿಕ ಅಪ್ಪಿತಪ್ಪಿ ಹಲ್ಲು ಉಜ್ಜಬೇಡಿ! ಉಜ್ಜಿದರೆ ಏನಾಗುತ್ತೆ ಗೊತ್ತಾ? Teeth Health