ಖ್ಯಾತ ನಿರ್ದೇಶಕನ ಜತೆ ಅನುಷ್ಕಾ ಶೆಟ್ಟಿ ರಹಸ್ಯ ಮದುವೆ! ಕೊನೆಗೂ ಬಹಿರಂಗವಾಯ್ತು ಅಸಲಿ ಸತ್ಯ | Anushka Shetty

Anushka Shetty
Published on

ಹೈದರಾಬಾದ್​: ನಟಿ ಅನುಷ್ಕಾ ಶೆಟ್ಟಿ ( Anushka Shetty ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮೂಲತಃ ಕನ್ನಡತಿಯಾಗಿರುವ ಅನುಷ್ಕಾ, ತೆಲುಗು ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ. ದಕ್ಷಿಣ ಭಾರತ ಸಿನಿರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೊನೆಯದಾಗಿ ಅವರು ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದರು. ಸುಮಾರು 2 ವರ್ಷಗಳ ವಿರಾಮದ ಬಳಿಕ ತೆಲುಗಿನಲ್ಲಿ ಘಾಟಿ ಹಾಗೂ ಮಲಯಾಳಂನಲ್ಲಿ ಖದನಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು 2025ರಲ್ಲಿ ಬಿಡುಗಡೆಯಾಗಲಿವೆ.

ಅನುಷ್ಕಾ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ವೇಳೆ ಅವರ ಘಾಟಿ ಚಿತ್ರದ ಪೋಸ್ಟರ್​ ಸಹ ಬಿಡುಗಡೆಯಾಯಿತು. ಇದೆಲ್ಲದರ ನಡುವೆ ಅನುಷ್ಕಾ ಅವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಹೌದು, ಸೈಜ್ ಜೀರೋ ಸಿನಿಮಾದ ನಿರ್ದೇಶಕ ಪ್ರಕಾಶ್ ಕೊವೆಲಮುಡಿ ಅವರನ್ನು 2020ರಲ್ಲೇ ಅನುಷ್ಕಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆ ಅನುಷ್ಕಾ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಖಾಸಗಿ ಪತ್ರಿಕಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮದುವೆ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ, ನಾನು ಪ್ರಕಾಶ್ ಕೋವೆಲಮುಡಿ ಅವರನ್ನು ಮದುವೆಯಾಗಿದ್ದೇನೆಯೇ? ಇದು ಖಂಡಿತ ನಿಜವಲ್ಲ. ಈ ವದಂತಿಗಳಿಂದ ನಾನೆಂದಿಗೂ ಪ್ರಭಾವಿತಳಾಗಿಲ್ಲ. ನನ್ನ ಮದುವೆ ಬಗ್ಗೆ ಯಾಕಿಷ್ಟು ಕುತೂಹಲ? ನನ್ನ ಮದುವೆಯು ಇಷ್ಟು ದೊಡ್ಡ ವಿಚಾರ ಅಂತ ನನಗೆ ಗೊತ್ತಿಲ್ಲ. ವೈವಾಹಿಕ ಸಂಬಂಧವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಹೀಗಿರುವಾಗ ನಾನು ಹೇಗೆ ನನ್ನ ಮದುವೆಯನ್ನು ಮರೆಮಾಡಲಿ? ಇದು ತುಂಬಾ ಭಾವನಾತ್ಮಕ ವಿಷಯ. ನನಗೂ ಖಾಸಗಿ ಬದುಕಿದೆ ಎಂಬುದು ನೆನಪಿರಲಿ. ಯಾರೂ ಕೂಡ ಅದರೊಳಗೆ ಪ್ರವೇಶಿಸಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ಮದುವೆಯಾದರೆ ಮುಂದೊಂದು ದಿನ ನನ್ನ ಮದುವೆ ದಿನಾಂಕ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ವದಂತಿಗೆ ಅನುಷ್ಕಾ ತೆರೆಎಳೆದರು.

ಇನ್ನು ಅನುಷ್ಕಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಅನುಷ್ಕಾ ಮತ್ತು ನಟ ಪ್ರಭಾಸ್ ಬಾಹುಬಲಿ ಸಿನಿಮಾದ ಆರಂಭದಿಂದಲೂ ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಈ ಹಿಂದೆ ಹಬ್ಬಿದ್ದವು. ಆದರೆ, ಇಬ್ಬರು ಇದನ್ನು ನಿರಾಕರಿಸಿದರು. ಇದಿಷ್ಟೇ ಅಲ್ಲದೆ, ಅನುಷ್ಕಾ ಅವರು ದುಬೈನ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಈಗಾಗಲೇ ಎರಡೂ ಕುಟುಂಬದವರು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ ಎಂಬುದು ಗಮನಾರ್ಹ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net