ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ “ಪುಷ್ಪ 2: ದ ರೂಲ್’ ಇದೇ ಡಿ. 5ರಂದು ತೆರೆಗೆ ಬರಲಿದೆ. ಬಾಕ್ಸಾಫಿಸಿನಲ್ಲಿ ದೊಡ್ಡ ಚಿತ್ರದ ಜತೆ ಕ್ಲ್ಯಾಶ್ ಆಗಬಾರದು ಎಂಬ ಕಾರಣಕ್ಕೆ ಕೆಲ ಚಿತ್ರಗಳು “ಪುಷ್ಪ 2′ ಚಿತ್ರಕ್ಕೂ ಮೊದಲೇ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರೆ, ಕೆಲವು ನಂತರ ತೆರೆಗೆ ಬರಲು ಸಿದ್ಧತೆ ನಡೆಸುತ್ತಿವೆ. ಆದರೆ, ಕನ್ನಡದ “ಧೀರ ಭಗತ್ ರಾಯ್’, ಪುಷ್ಪರಾಜ್ ಜತೆ ನೇರ ಹಣಾಹಣಿ ನಡೆಸಲು ತೋಳೇರಿಸಿಕೊಂಡಿದ್ದಾನೆ. ಚಿತ್ರವನ್ನು ಡಿ. 6ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಕರ್ಣನ್ ಚೊಚ್ಚಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಧೀರ ಭಗತ್ ರಾಯ್’ ಕಥೆ 1970ರ ದಶಕದ ಭೂ ಸುಧಾರಣಾ ಕಾಯ್ದೆಯ ಸುತ್ತ ಸಾಗುತ್ತದೆ. ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ನಾಯಕನಾಗಿದ್ದು, ಅವರಿಗೆ ಸುಚರಿತಾ ಜೋಡಿಯಾಗಿದ್ದಾರೆ. ನಿರ್ದೇಶಕ ಕರ್ಣನ್, “”ಪುಷ್ಪ 2′ ರಿಲೀಸ್ ಸಮಯದಲ್ಲಿ ನಮ್ಮ ಚಿತ್ರವೂ ಬಿಡುಗಡೆಯಾಗುತ್ತಿದೆ. ಥಿಯೇಟರ್ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿದೆ. ಕನ್ನಡಿಗರು ಕನ್ನಡ ಸಿನಿಮಾಗಳ ಕೈ ಹಿಡಿಯುತ್ತಾರೆಂಬ ನಂಬಿಕೆಯೂ ಇದೆ. “ಬಾಹುಬಲಿ’ ಮುಂದೆ ನಮ್ಮ “ರಂಗಿತರಂಗ’ ಗೆದ್ದಿತ್ತು. ಅದೇ ರೀತಿಯ ಇತಿಹಾಸ ಇದೀಗ ಮರುಕಳಿಸಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ನಾಯಕ ರಾಕೇಶ್, “ಅಲ್ಲು ಅರ್ಜುನ್ ನನ್ನ ೇವರಿಟ್ ನಟ. ಆದರೂ “ಪುಷ್ಪ 2′ ರಿಲೀಸ್ ಆದ ಮರುದಿನ ನಮ್ಮ ಚಿತ್ರವನ್ನೂ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು. “ಕರ್ನಾಟಕದಲ್ಲಿ “ಪುಷ್ಪ 2′ ಚಿತ್ರದಿಂದ ಕನ್ನಡದ “ಧೀರ ಭಗತ್ ರಾಯ್’ಗೆ ಸಮಸ್ಯೆ ಎದುರಾದರೆ ಹೋರಾಟಕ್ಕಿಳಿಯುತ್ತೇವೆ’ ಎಂದು ಕನ್ನಡ ಪರ ಹೋರಾಟಗಾರ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು. ರಾಕೇಶ್, ಸುಚರಿತಾ ಜತೆ ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಪ್ರವಿಣಗ್ ಗೌಡ, ಹರಿರಾಮ್, ಸಂದೇಶ್. ಸುಧೀರ್ ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಸೆಲ್ವಂ ಜಾನ್, ವಿಶ್ವ ಸಂಕಲನದಲ್ಲಿ “ಧೀರ್ ಭಗತ್ ರಾಯ್’ ಮೂಡಿಬಂದಿದೆ.