

ನಾಗ್ಪುರ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಮೃತಪಟ್ಟು, ಓರ್ವ ಚಿಂತಾಜನಕವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಘಟನೆಯು ನಾಗ್ಪುರ ಹೊರವಲಯದಲ್ಲಿರುವ ಕಟೋಲ್-ಕಲ್ಮೇಶ್ವರ ರಸ್ತೆಯ ಸೋನ್ಖಾಂಬ್ ಗ್ರಾಮದ ಬಳಿ ನಡೆದಿದ್ದು, ಮೃತರನ್ನು ಮಯೂರ್ ಇಂಗಳೆ (22), ವೈಭವ್ ಚಿಖಲೆ (32), ಸುಧಾಕರ್ ಮಾನಕರ್ (42), ವಿಠ್ಠಲ್ ತೋಟೆ (45), ಅಜಯ್ ಚಿಖಲೆ (40) ಮತ್ತು ರಮೇಶ ಹಲೊಂಡೆ ಎಂದು ಗುರುತಿಸಲಾಗಿದೆ. ಜಗದೀಶ್ ಧೋನ್ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದ್ದು, ನಾಗ್ಪುರ ಹೊರವಲಯದಲ್ಲಿರುವ ಕಟೋಲ್-ಕಲ್ಮೇಶ್ವರ ರಸ್ತೆಯ ಸೋನ್ಖಾಂಬ್ ಗ್ರಾಮದ ಬಳಿ ಕಾರು ಹಾಗೂ ಸೋಯಾಬೀನ್ ಸಾಗಿಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನುಳಿದವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.