

ನವದೆಹಲಿ: ನೂತನ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪ್ರಕರಣದ ಮಾಸ್ಟರ್ಮೈಂಡ್ ಲಲಿತ್ ಝಾ ಪೋಷಕರು ಈ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ಮಗ ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಲಲಿತ್ ಝಾ ತಂದೆ ದೇವಾನಂದ್ ನನ್ನ ಮಗನನ್ನು ಬಂಧಿಸಿರುವ ಬಗ್ಗೆ ನಾನು ಕೆಲವರಿಂದ ತಿಳಿದುಕೊಂಡೆ. ನಮ್ಮ ಮನೆಯಲ್ಲಿ ಟಿವಿ ಸಹ ಇಲ್ಲ ಆತ ಈ ರೀತಿ ಕೆಲಸ ಮಾಡಿದ್ದಾನೆ ಎಂದರೆ ಅದು ಸತ್ಯಕ್ಕೆ ದೂರವಾದ ಮಾತು. ಆತ ಜನರಿಗೆ ಸಹಾಯ ಮಾಡಲು ಇಷ್ಟಪಡುತ್ತಿದ್ದ ಹೊರತು ಈ ರೀತಿಯ ಕೆಲಸಗಳ ಬಗ್ಗೆ ಅಲ್ಲ ಎಂದಿದ್ದಾರೆ.
ನನ್ನ ಮಗ ರಾಕ್ಷಸ ಅಲ್ಲ. ಆತನ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅವನೂ ಮೂರು ಬಾರಿ ರಕ್ತದಾನ ಮಾಡಿದ್ದು, ಈ ರೀತಿಯ ರಾಕ್ಷಸೀ ಕೆಲಗಳಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ. ನನ್ನ ಮಗ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ. ಆರ್ಥಿಕವಾಗಿ ಹಿಂದುಳಿದಿದ್ದ ವಿದ್ಯಾರ್ಥಿಗಳಿಗೆ ಟ್ಯೂಷನ್ ಶುರು ಮಾಡಿ ಅವರಿಗೆ ಹಣ ಸಹಾಯ ಮಾಡುತ್ತಿದ್ದ.
ಕಳೆದ ವಾರ ಆತ ಕೊನೆಯದಾಗಿ ನಮ್ಮನ್ನು ಭೇಟಿ ಮಾಡಿದ್ದ. ದೆಹಲಿಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದ್ದ. ಈಗ ನೋಡಿದರೆ ಆತ ಸಂಸತ್ ಭವನದ ಒಳಗಡೆ ದಾಳಿ ಮಾಡಿದ್ದಾನೆ ಎಂದೆಲ್ಲಾ ಹೇಳುತ್ತಿದ್ದಾರೆ. ನಮಗೆ ಕಾನೂನಿನಲ್ಲಿ ಸಂಪೂರ್ಣ ವಿಶ್ವಾಸವಿದ್ದು, ಆತ ದೋಷಮುಕ್ತನಾಗಿ ಹೊರಬರಲಿದ್ದಾನೆ ಎಂದು ಲಲಿತ್ ಝಾ ಅವರ ತಂದೆ ದೇವಾನಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.