ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

sisters suicide
Published on

ಕಲಬುರಗಿ: ಒಂದೇ ಮನೆಯಲ್ಲಿ ಅಕ್ಕ-ತಂಗಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಿಶ್ವನಾಥ ಸುತಾರ ಎಂಬುವರ ಪುತ್ರಿಯರಾದ ಐಶ್ವರ್ಯ ಸುತಾರ(20) ಹಾಗೂ ಸಾರಿಕಾ ಸುತಾರ(17) ಮೃತ ದುರ್ದೈವಿಗಳು.

ವಿಶ್ವನಾಥ ಸುತಾರಗೆ ಐವರು ಮಕ್ಕಳು. ಈ ಪೈಕಿ ಮೂವರಿಗೆ ಮದುವೆಯಾಗಿದೆ. ಐದನೇಯವಳಾದ ಸಾರಿಕಾಗೆ ತಿಂಗಳ ಹಿಂದಷ್ಟೆ ಮದುವೆ ನಿಶ್ಚಯವಾಗಿತ್ತು. ನಾಲ್ಕನೇಯವಳಾದ ಐಶ್ವರ್ಯಗೆ ವರನನ್ನು ಹುಡುಕಲಾಗುತಿತ್ತು ಎನ್ನಲಾಗಿದೆ. ತಂದೆ ವಿಶ್ವನಾಥ ಅವರು ಊರಿನಲ್ಲೇ ಪೆಟ್ಟಿ ಅಂಗಡಿ ಇಟ್ಟುಕೊಂಡಿದ್ದಾರೆ.

ಎಂದಿನಂತೆ ಸೋಮವಾರ ಮಧ್ಯಾಹ್ನ ಊಟಕ್ಕೆಂದು ಅಂಗಡಿಯಿಂದ ಮನೆಗೆ ಬಂದ ತಂದೆಗೆ ಈ ಸಹೋದರಿಯರೇ ಊಟ ಬಡಿಸಿದ್ದರು. ಊಟ ಮಾಡಿ ತಂದೆ ಅಂಗಡಿಗೆ ತೆರಳುತ್ತಿದ್ದಂತೆ ನೇಣುಬಿಗಿದುಕೊಂಡು ಅಕ್ಕ-ತಂಗಿ ಇಬ್ಬರೂ ಮೃತಪಟ್ಟಿದ್ದಾರೆ.

ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಸಂಜೆ ಹೊಲದಿಂದ ಮನೆಗೆ ಬಂದ ತಾಯಿ, ಮಕ್ಕಳ ಶವ ಕಂಡು ಚೀರಾಡುತ್ತಿದ್ದಂತೆ ಸ್ಥಳೀಯರು ಓಡಿ ಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್ಐ ರಾಜಶೇಖರ ರಾಠೋಡ ಭೇಟಿ‌ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಮಕ್ಕಳು ಬಾರದ ಲೋಕಕ್ಕೆ ಹೋಗಿದ್ದಾರೆಂದು ತಿಳಿಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ತನಿಖೆ ನಂತರವಷ್ಟೇ ಸಹೋದರಿಯರ ಸಾವಿನ ಕಾರಣ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net