ಹಸಿವು ನೀಗಿಸಿಕೊಳ್ಳುವ ತವಕದಲ್ಲಿದ್ದ ಅಕ್ಕ-ತಮ್ಮನ ಪ್ರಾಣ ತೆಗೆದ ಕ್ರೇನ್..!

accident
Published on

ದಾವಣಗೆರೆ: ಅಕ್ಕ-ತಮ್ಮ ಇಬ್ಬರೂ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಭಿಕ್ಷೆ ಬೇಡುತ್ತ ಊರೂರು ಅಲೆಯುತ್ತಿದ್ದರು. ಅದೇ ರೀತಿ ಬುಧವಾರ ಬೆಳಗ್ಗೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೂ ಬಂದಿದ್ದರು. ಭಿಕ್ಷೆ ಬೇಡಿ ಹೊರಟಿದ್ದವರ ಮೇಲೆ ಕ್ರೇನ್​ ರೂಪದಲ್ಲಿ ಬಂದ ಜವರಾಯ ಅವರಿಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.

ಉತ್ತರ ಪ್ರದೇಶ ಮೂಲದ ಮನಿಷಾ (18) ಹಾಗೂ ಅನಂತಸೇನ (12) ಮೃತರು. ಸಂಬಂಧದಲ್ಲಿ ಇಬ್ಬರೂ ಅಕ್ಕ- ತಮ್ಮ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಿಂದ ಬಂದಿರುವ ಇವರ ಕುಟುಂಬದವರು ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ದಿನವೂ ಬೆಳಗ್ಗೆ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ಹೋಗಿ ಭಿಕ್ಷೆ ಬೇಡಿ ಸಂಜೆ ದಾವಣಗೆರೆಗೆ ವಾಪಸಾಗುತ್ತಾರೆ.

ಬುಧವಾರ ಬೆಳಗ್ಗೆ ನಲ್ಲೂರು ಗ್ರಾಮಕ್ಕೆ ಬಂದು ಭಿಕ್ಷೆ ಬೇಡಿ ರಸ್ತೆ ದಾಟುತ್ತಿದ್ದ ಮನಿಷಾ ಮತ್ತು ಅನಂತಸೇನ ಎಂಬುವರ ಮೇಲೆ ಕ್ರೇನ್ ಹರಿದಿದ್ದು, ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net