ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

kill
Published on

ಮಾಸ್ಕೋ: ಹೆಣ್ಣು ಮಕ್ಕಳೆಂದರೆ ಅಮ್ಮನಿಗಿಂತ ಜಾಸ್ತಿ ಅಪ್ಪನಿಗೆ ಪ್ರೀತಿ ಎನ್ನುತ್ತಾರೆ. ಆದರೆ ಅದೇ ಪ್ರೀತಿ ತೋರುವ ತಂದೆಯನ್ನೇ ಈ ಮೂರು ಹೆಣ್ಣು ಮಕ್ಕಳು ಕೊಲೆ ಮಾಡಿಬಿಟ್ಟಿದ್ದರು. ಆ ಕೊಲೆಯ ಹಿಂದಿನ ನೋವಿನ ಕಥೆ ಎಂತವರಿಗೂ ಕಣ್ಣೀರು ತರಿಸುತ್ತದೆ.

ಇಂತದ್ದೊಂದು ಕೊಲೆ ನಡೆದಿದ್ದು 2018ರ ಜುಲೈ 27ರಂದು. ಆಗ 17 ವರ್ಷದವಳಾಗಿದ್ದ ಮೇರಿಯಾ, ಆಂಜೇಲಿನಾ (18 ಮತ್ತು ಕ್ರಿಸ್ಟಿಯಾನಾ (19) ಈ ಕೊಲೆ ಮಾಡಿದ್ದು. ಈ ಮೂರು ಹೆಣ್ಣು ಮಕ್ಕಳು ತಂದೆಯೊಂದಿಗೆ ರಷ್ಯಾದ ಮಾಸ್ಕೋದಲ್ಲಿದ್ದ ಫ್ಲ್ಯಾಟ್​ ಒಂದರಲ್ಲಿ ವಾಸಿಸುತ್ತಿದ್ದರು. ಅಮ್ಮನ ಮೇಲೆ ಸದಾ ಹಲ್ಲೆ ಮಾಡುತ್ತಿದ್ದ ಅಪ್ಪ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದ. ಮಕ್ಕಳು ಆಕೆಯನ್ನು ಭೇಟಿ ಮಾಡದಂತೆ ಕೂಡಿ ಹಾಕಿದ್ದ. ಮನೆಯಲ್ಲಿದ್ದ ಮಕ್ಕಳ ಮೇಲೆ ಯಾವಾಗಲೂ ಹಲ್ಲೆ ನಡೆಸುತ್ತಿದ್ದನಂತೆ. ದೈಹಿಕ ಹಲ್ಲೆ ಮಾತ್ರವಲ್ಲದೆ ಲೈಂಗಿಕವಾಗಿಯೂ ಹಿಂಸಿಸುತ್ತಿದ್ದನಂತೆ.

ಕೊಲೆ ನಡೆದ ದಿನ ಕೂಡ ಅಪ್ಪ ಅದೇ ರೀತಿ ಮಾಡಿದ್ದಾನೆ. ಮಕ್ಕಳು ಮನೆ ಸ್ವಚ್ಛ ಮಾಡಿಲ್ಲವೆಂದು ಅವರ ಮೇಲೆ ರೇಗಾಡಿ, ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ. ಮೂವರು ಮಕ್ಕಳು ಸಾಕಷ್ಟು ಸಮಯ ಒದ್ದಾಡಿ ಆಮೇಲೆ ಸುಧಾರಿಸಿಕೊಂಡಿದ್ದಾರೆ. ಈ ಎಲ್ಲ ನೋವಿನಿಂದ ಬೇಸತ್ತಿದ್ದ ಮಕ್ಕಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅಪ್ಪನನ್ನು ಇಂದು ಕೊಲೆ ಮಾಡಿಬಿಡೋಣ ಎಂದು ಯೋಜನೆ ಹಾಕಿಕೊಂಡಿದ್ದಾರೆ.

ಅದರಂತೆ ರಾತ್ರಿ ಅಪ್ಪ ಮಲಗಿದ್ದಾಗ ಆತನಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ್ದಾರೆ. ಪೊಲೀಸರು ಸಹೋದರಿಯರನ್ನು ಬಂಧಿಸಿದ್ದಾರೆ. ಆದರೆ ಈ ವಿಚಾರವಾಗಿ ಪೂರ್ತಿ ರಷ್ಯಾ ಈ ಸಹೋದರಿಯರ ಪರ ನಿಂತಿತ್ತು. ಅವರು ತಮ್ಮ ಜೀವ ರಕ್ಷಣೆಗಾಗಿ ಈ ಕೆಲಸ ಮಾಡಿದ್ದಾರೆ. ಅವರನ್ನು ಬಂಧನಮುಕ್ತ ಮಾಡಬೇಕೆಂದು ಲಕ್ಷಾಂತರ ಜನರು ಹೋರಾಟ ಮಾಡಿದ್ದರು.

ಬರೋಬ್ಬರಿ ಎರಡು ವರ್ಷಗಳ ಕಾಲ ಎಳೆದಾಡಿದ ಪ್ರಕರಣದಲ್ಲಿ ಇದೀಗ ಸಹೋದರಿಯರಿಗೆ ಜಾಮೀನು ದೊರೆತಿದೆ. ಅಂತೂ ಸಹೋದರಿಯರು ತಮ್ಮ ಅಮ್ಮನೊಂದಿಗೆ ಬದುಕಲು ಸ್ವಾತಂತ್ರ್ಯರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net