

ರಾಂಚಿ: ಜಿಎಸ್ಟಿ ಪರಿಚಯವಾದಾಗಿನಿಂದ ಜಿಎಸ್ಟಿ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಅದೇ ರೀತಿ 3.5 ಕೋಟಿ ರೂಪಾಯಿ ಜಿಎಸ್ಟಿ ವಂಚನೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲು ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆ ಪ್ರಮಾಣದ ಮೋಸ ಮಾಡಿದ್ದು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ!
ಹೌದು, ಇದು ಸತ್ಯವೇ. ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಮೊಸಾಬೊನಿ ಬ್ಲಾಕ್‌ನ ರೈಪಹರಿ ಗ್ರಾಮದ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ, ಪ್ರತಿದಿನ ನರೇಗಾ ಯೋಜನೆಯಲ್ಲಿ ಸರಿ ಸುಮಾರು 200 ರೂಪಾಯಿ ದುಡಿಯವವನೇ ಈ ಮೋಸ ಮಾಡಿದ್ದು. ಈತ ಬಹುಕೋಟಿ ರೂಪಾಯಿ ಮೌಲ್ಯದ ಕಂಪನಿಯೊಂದರ ಮಾಲೀಕ. ಈತನ ಹೆಸರಿನಲ್ಲಿ ಎಂಎಸ್ ಸ್ಟೀಲ್ ಹೆಸರಿನ ಸ್ಟೀಲ್ ಕಂಪನಿಯಿದೆ. ಆ ಕಂಪನಿಯ 5.58 ಕೋಟಿ ವ್ಯವಹಾರ 3.5 ಕೋಟಿ ರೂಪಾಯಿ ಜಿಎಸ್ಟಿ ವಂಚನೆಯಾಗಿರುವುದಾಗಿ ದೂರು ದಾಖಲಾಗಿದೆ.
ಕೂಲಿ ಕಾರ್ಮಿಕನ ಸರಿಯಾದ ವಿಚಾರಣೆ ನಡೆಸಿದ ನಂತರ ನಿಜಾಂಶ ಹೊರಬಿದ್ದಿದೆ. ನಿಜಕ್ಕೂ ಆ ಕೂಲಿ ಕಾರ್ಮಿಕನಿಗೂ ಕಂಪನಿಗೂ ಯಾವುದೇ ಸಂಬಂಧವೇ ಇಲ್ಲ. ಯಾರೊ ದುಷ್ಕರ್ಮಿಗಳು ಈತನ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಳಸಿ ಈ ಮೋಸ ಮಾಡಿದ್ದಾರೆ.
2018ರಲ್ಲಿ ಈ ಕೂಲಿಕಾರ್ಮಿಕನಿಗೆ ಪ್ರತಿ ತಿಂಗಳು ಖಾತೆಗೆ ನೇರವಾಗಿ 2 ಸಾವಿರ ರೂಪಾಯಿ ಬರುವಂತೆ ಮಾಡುವುದಾಗಿ ಈತನ ಸೋದರಳಿಯ ಬೈಲಾ ಮುರ್ಮು ಹೇಳಿದ್ದನಂತೆ. ಅದಕ್ಕೆಂದು ಈತನ ಪಾಸ್ಬುಕ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ನ್ನು ತೆಗೆದುಕೊಂಡು ಹೋಗಿದ್ದನಂತೆ. ಈ ದಾಖಲೆಗಳನ್ನು ಆತನ ಸಂಬಂಧಿ ಸುನಾರಾಮ್ ಹೆಂಬ್ರಾಮ್ ಅವರಿಗೆ ನೀಡಲಾಗಿದೆ. ಅಲ್ಲಿಂದ ದಾಖಲೆಯನ್ನು ಸುಶಾಂತ್ ಕುಮಾರ್ ಸಮಂತೊ ಹೆಸರಿನವರಿಗೆ ನೀಡಲಾಗಿದೆ. ನಂತರ ಏನಾಯಿತು ಎನ್ನುವುದರ ಬಗ್ಗೆ ಕಾರ್ಮಿಕನಿಗೂ ಮಾಹಿತಿ ಇಲ್ಲ. ಯಾವುದೇ ಹಣವೂ ನನ್ನ ಖಾತೆಗೆ ಬಂದಿಲ್ಲ ಎಂದು ಆತ ಹೇಳಿದ್ದಾನೆ.
ಬೆಳಗ್ಗೆ ಕೆಲಸ ಮಾಡುತ್ತಿದ್ದವನನ್ನು ಬಂಧಿಸಿದ ಕಾರಣ ಗ್ರಾಮಸ್ಥರು ಠಾಣೆಯ ಎದುರು ಹೋರಾಟ ನಡೆಸಿದ್ದಾರೆ. ಕಾರ್ಮಿಕನ ತಪ್ಪಿಲ್ಲ ಎನ್ನುವುದು ಅರಿವಿಗೆ ಬಂದ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟು ಕಳುಹಿಸಲಾಗಿದೆ. ನಿಜವಾದ ವಂಚಕರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)